ಕೇರಳಾಪುರಕ್ಕೆ ಕೆಶಿಪ್ ಇಂಜಿನಿಯರ್ ಗಳ ಭೇಟಿ; ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಲೋಪವಾದರೆ ಸಹಿಸುವುದಿಲ್ಲ ಎಂದ ಎ. ಮಂಜು

ಅರಕಲಗೂಡು: ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ವಿಸ್ತರಣೆ ಕಡಿತಗೊಳಿದಂತೆ ಮಾಜಿ ಸಚಿವ ಎ. ಮಂಜು ಪತ್ರ ಬರೆದ ಹಿನ್ನಲೆಯಲ್ಲಿ ತಾಲೂಕಿನ ಕೇರಳಾಪುರದಲ್ಲಿ ಸೋಮವಾರ ಕೆಶಿಪ್ ಇಂಜಿನಿಯರ್ ಗಳು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಮಾಜಿ ಸಚಿವ ಎ. ಮಂಜು ಇಂಜಿನಿಯರ್ ಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಕನಸಿನ ಕೂಸಾದ ಈ ಮಾರ್ಗದ ರಸ್ತೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಆರಂಭಿಸಿರುವ ಕುರಿತು ಸ್ಥಳೀಯರು ದೂರು ನೀಡಿದ ಪರಿಣಾಮ ಪತ್ರ ಬರೆದಿದ್ದೆ. 1300 ಕೋಟಿ ರೂ ಮೊತ್ತದ ಕಾಮಗಾರಿ ತಾಲೂಕಿನಲ್ಲಿ 29 ಕಿಮೀ ಹಾದು ಹೋಗಿದ್ದು ಇದಕ್ಕಾಗಿ ನೂರು ಕೋಟಿ ರೂ ವ್ಯಯಿಸಲಾಗುತ್ತಿದೆ. ಗಡಿ ಭಾಗದ ಮೈಸೂರು ಜಿಲ್ಲೆಯಲ್ಲಿ 16 ಮೀಟರ್ ರಸ್ತೆ ವಿಸ್ತರಣೆ ಮಾಡಿ ತಾಲೂಕಿನ ಕೇರಳಾಪುರದಲ್ಲಿ ಕೇವಲ 11 ಮೀ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಲಾಗಿತ್ತು. ರಾಜಕೀಯ ಒತ್ತಡದ ಕಾರಣಕ್ಕಾಗಿ ತಾಲೂಕಿನ ಭಾಗದಲ್ಲಿ ಲೋಪವೆಸಲಾಗುತ್ತಿತ್ತು. ಇದೀಗ ಇಂಜಿನಿಯರ್ ಗಳನ್ನು ಕರೆಸಿ ಮಾತುಕತೆ ನಡೆಸಿದ್ದು 16 ಮೀಟರ್ ವಿಸ್ತೀರ್ಣ ಪಡಿಸುವುದಾಗಿ ಒಪ್ಪಿದ್ದಾರೆ. 

ಕೇರಳಾಪುರದಲ್ಲಿ ನಾಲ್ಕು ಡಿವೈಡರ್ ಅಳವಡಿಸಿ ನಾಲ್ಕು ಲೈನ್ ರಸ್ತೆ ಅಭಿವೃದ್ಧಿ ಪಡಿಸಬೇಕು. ಪಾದಚಾರಿಗಳು ವಾಹನಗಳ ಓಡಾಟಕ್ಕೆ ತೊಂದರೆ ಆಗದಂತೆ ನಿಲುಗಡೆ ಪಾರ್ಕ್ ನಿರ್ಮಿಸಬೇಕು. ಕಾಮಗಾರಿಗೆ ಅನುದಾನದ ಸಾಕಾಗದಿದ್ದರೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ತಾಲೂಕಿನ ಭಾಗದಲ್ಲಿ ರಸ್ತೆ ವಿಸ್ತರಣೆ ಕಡಿತಗೊಳಿಸಿ ಅಭಿವೃದ್ಧಿ ಕಾಮಗಾರಿಯಲ್ಲಿ ಅನ್ಯಾಯವಾದರೆ ಸಹಿಸುವುದಿಲ್ಲ. ಇಂಜಿನಿಯರ್ ಗಳು ಕೊಟ್ಟ ಭರವಸೆ ಉಳಿಸಿಕೊಳ್ಳದಿದ್ದರೆ ಈ ಭಾಗದ ಜನರೊಂದಿಗೆ ಸೇರಿ ತೀವ್ರ ಹೋರಾಟ ನಡೆಸುವುದು ಶತಸಿದ್ದ ಎಂದು ಎಚ್ಚರಿಸಿದರು.

ಕೆಶಿಪ್ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಮಾತನಾಡಿ, 16 ಮೀ ರಸ್ತೆ ವಿಸ್ತರಣೆ ಪಡಿಸಿ ವೈಜ್ಞಾನಿಕ ಮಾದರಿಯಲ್ಲೇ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದರು.

ಸಂಪಾದಕ‌ ರವಿ

Post a Comment

0 Comments