ಅರಕಲಗೂಡು: ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಕುರಿತು ತಾಲ್ಲೂಕು ಕಾಂಗ್ರಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಅನುಚಿತ ಮಾತುಗಳನ್ನಾಡಿದ್ದು ಇದು ಅತ್ಯಂತ ಖಂಡನೀಯವಾಗಿದೆ ಎಂದು ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ಆರ್.ಮಂಜುನಾಥ್ ಖಂಡಿಸಿದರು.
ಕಾಂಗ್ರೆಸ್ ಮುಖಂಡರಾದ ಸಂಸದ ಡಿ.ಕೆ ಸುರೇಶ್, ಪಕ್ಷದ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹಾಗೂ ಪಕ್ಷದ ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ದೇಶದ ಉನ್ನತ ಸ್ಥಾನದಲ್ಲಿರುವ ನಾಯಕರ ಬಗ್ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆಡಿರುವ ಮಾತುಗಳು ಇವರ ಕೀಳು ಅಭಿರುಚಿಯನ್ನು ತೋರಿಸುತ್ತದೆ ಎಂದು ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಮಾತನಾಡಿದರೂ ತಮ್ಮ ಪ್ರಬುದ್ಧತೆ ಮೆರೆದಿದ್ದಾರೆ. ಆದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅವೇಶದಿಂದ ನಾಲಿಗೆ ಹರಿ ಬಿಟ್ಟಿರುವುದು ಮುಂದಿನ ದಿನಗಳಲ್ಲಿ ಇವರಿಗೆ ತಿರುಗು ಬಾಣವಾಗಲಿದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿ, ಬಾಯಿಗೆ ಬಂದಂತೆ ಮಾತನಾಡದೆ ತಮ್ಮ ಸ್ಥಾನದ ಜವಾಬ್ದಾರಿ ಅರಿತು ಪ್ರಭುದ್ಧತೆಯಿಂದ ವರ್ತಿಸುವಂತೆ ಸಲಹೆ ಮಾಡಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ಜಿಲ್ಲಾಧ್ಯಕ್ಷ ಮುತ್ತಿಗೆ ರಮೇಶ್, ತಾಲ್ಲೂಕು ಘಟಕದ ಪ್ರದಾನ ಕಾರ್ಯದರ್ಶಿ ಎ. ಎಂ ರಘು ಬಿಜೆಪಿ ನಾಯಕರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿದರು.
ತಾಲ್ಲೂಕು ಘಟಕ್ ಖಜಾಂಚಿ ಬಾಣದ ಹಳ್ಳಿ ಗಣೇಶ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಎಚ್.ಖಂಡೇಶ್ವರ್ ಕುಮಾರ್, ಪಪಂ ಮಾಜಿ ಸದಸ್ಯ ಮಂಜು, ಆಶ್ರಯ ಸಮಿತಿ ಸದಸ್ಯ ಜಗದೀಶ್ ಗೋಷ್ಠಿಯಲ್ಲಿದ್ದರು.
ಸಂಪಾದಕ - ರವಿ
0 Comments