ಅರಕಲಗೂಡು: ವಿಜಯನಗರ ಅರಸರ ಕಾಲದ ಅಭಿವೃದ್ಧಿ ಪರ್ವಗಳ ಅರಿವಿದ್ದ ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಇಟ್ಟು ಭವಿಷ್ಯದ ದೃಷ್ಟಿಯಿಂದ ಕಟ್ಟಿದ ಬೆಂಗಳೂರು ಇಂದು ಇಡೀ ಪ್ರಪಂಚವೇ ತಿರುಗಿ ನೋಡುವಂತ ಮಹಾನ್ ಸಾಧನೆ ಮಾಡಲು ಕಾರಣಕರ್ತರಾಗಿದ್ದಾರೆ ಎಂದು ಹಾಸನದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ನುಡಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಯುವ ಒಕ್ಕಲಿಗರ ವೇದಿಕೆ ವತಿಯಿಂದ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ಅಂಗವಿಕಲರಿಗೆ ದಿನಸಿ ಆಹಾರ ಕಿಟ್ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಒಕ್ಕಲುತನ ನಡೆಸಿ ಅನ್ನ ನೀಡುವ ಒಕ್ಕಲಿಗ ಸಮಾಜ ಇತಿಹಾಸದ ಉದ್ದಕ್ಕೂ ನಾಡಿನ ಸರ್ವಾಂಗೀಣ ಏಳಿಗೆಗೆ ಶ್ರಮಿಸಿದೆ. ಸಾಹಿತ್ಯ ರಂಗದಲ್ಲಿ ರಸ ಋಷಿ ಕುವೆಂಪು ಸೇರಿದಂತೆ ಅನೇಕ ಮಹನೀಯರು ನಾನಾ ಕ್ಷೇತ್ರಗಳಲ್ಲಿ ತೊಡಗಿಕೊಂಡು ನಾಡಿನ ಒಳಿತಿಗೆ ಮಹತ್ತರವಾದ ಕೊಡುಗೆ ನೀಡಿದ ಹೆಮ್ಮೆಯಿದೆ. ವಿದೇಶಗಳಲ್ಲಿಯೂ ಜಗದ್ಗುರು ಬಾಲಗಂಗಾಧರನಾಥ ಶ್ರೀಗಳ ಸೇವೆ ಸ್ಮರಿಸಲಾಗುತ್ತಿದೆ. ಜಾಗತಿಕವಾಗಿ ಇಂದು ಗುರುತರ ಹೆಸರು ಗಳಿಸಲು ಅಂದು ಬೆಂಗಳೂರು ಕಟ್ಟಿ ಬೆಳಗಿಸಿದ ಕೆಂಪೇಗೌಡರು ಮೇರುಶಿಖರದ ಸಾಧನೆ ಮಾಡಿದ್ದಾರೆ ಎಂದು ಬಣ್ಣಿಸಿದರು.
ರಕ್ತದಾನದಂತ ಸಮಾಜಮುಖಿ ಸೇವಾ ಕಾರ್ಯ ನಡೆಸಿ ಅಂಗವಿಕಲರಿಗೆ ದಿನಸಿ ಕಿಟ್ ನೀಡಿ ನೋಂದ ಸಮಾಜದ ಜನರ ಕಣ್ಣೊರೆಸುವ ಮುಖೇನ ಕೆಂಪೇಗೌಡರ ಜಯಂತಿಯನ್ನು ಬಹಳ ಅರ್ಥಪೂರ್ಣ ವಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವ ಒಕ್ಕಲಿಗರ ವೇದಿಕೆ ಅಧ್ಯಕ್ಷ ಅನಿಲ್ ಗೌಡ, ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್, ಡಾ. ಮೋಹನ್ ಮಲ್ಲಪ್ಪ, ಮುಖಂಡರಾದ ಬಸವನಹಳ್ಳಿ ಜವರೇಗೌಡ, ಎಚ್.ಎನ್. ಗೌರೀಶ್, ಗಂಗಾಧರ್, ಜನಾರ್ಧನ್, ರಾಜೀವ್, ಗೋವಿಂದರಾಜು, ಲೋಕೇಶ್, ಸತ್ಯ, ಕೃಷ್ಣೇಗೌಡ, ಧರ್ಮ, ಸಿ.ಕೆ. ಮೂರ್ತಿ, ಡಾ. ಶಿವರಾಂ ಮುಂತಾದವರು ಉಪಸ್ಥಿತರಿದ್ದರು.
ಸಂಪಾದಕ - ರವಿ
0 Comments