ಉತ್ತಮ ಚಿಕಿತ್ಸಾತ್ಮಕ ಸೌಲಭ್ಯಗಳಿಗಾಗಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಮನವಿ: ಎ. ಮಂಜು

ಅರಕಲಗೂಡು: ಜನತೆಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕೊಣನೂರು ಮತ್ತು ಕೇರಳಾಪುರ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮಾಜಿ ಸಚಿವ ಎ. ಮಂಜು ತಿಳಿಸಿದರು.

ತಾಲೂಕಿನ ಕಬ್ಬಳಿಗೆರೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮನವಿ ಮೇರೆಗೆ ಸರ್ಕಾರ ಕೊಣನೂರು ಸಮುದಾಯ ಆರೋಗ್ಯ ಕೇಂದ್ರವನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದೆ. 
ಕೊಣನೂರು ಆಸ್ಪತ್ರೆಯಲ್ಲಿರುವ ಸೌಲಭ್ಯಗಳು ಕೇರಳಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಯಾಗಿ ಮೇಲ್ದರ್ಜೆಗೇರಬೇಕಾಗಿದೆ. ರಾಮನಾಥಪುರ ಸರ್ಕಾರಿ ಆಸ್ಪತ್ರೆಗೆ ಉತ್ತಮ ಸೌಲಭ್ಯಗಳು ಸಿಗುವಂತಾಗಬೇಕು. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದು ಈಡೇರುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಕೋವಿಡ್ ಆಸ್ಪತ್ರೆಗೆ ತಾತ್ಕಾಲಿಕ ವೈದ್ಯರ ಬದಲಿಗೆ ತಜ್ಞ ವೈದ್ಯರನ್ನು ನೇಮಕ ಆಗಬೇಕಿದೆ. ಈ ಬಗ್ಗೆ ಎನ್‌ಜಿಒ ಸಂಸ್ಥೆ ತುರ್ತು ಕ್ರಮ ಕೈಗೊಳ್ಳುವ ಮುಖೇನ ರೋಗಿಗಳಿಗೆ ಉತ್ತಮ ಚಿಕಿತ್ಸಾತ್ಮಕ ಸೌಲಭ್ಯಗಳು ಸಿಗುವಂತೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ತಾಲೂಕು ಆಡಳಿತ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಂಡಿದ್ದು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಕೋವಿಡ್ ಕಾರ್ಯ ಪಡೆಯವರು ಜನರ ಜೀವ ಉಳಿಸುವ ಸಲುವಾಗಿ ಶಕ್ತಿಮೀರಿ ಶ್ರಮಿಸಿದ್ದು ಶ್ಲಾಘನೀಯ ಸಂಗತಿ. ಸಮಾಜ ಸೇವಕರು ಮತ್ತು ದಾನಿಗಳು ಆಸ್ಪತ್ರೆಗಳಿಗೆ ಕೈಲಾದ ಸಹಾಯ ಮಾಡಿದ್ದಾರೆ. ನಾನೂ ಕೂಡ ಆಸ್ಪತ್ರೆಗಳಿಗೆ ಔಷಧಗಳನ್ನು ಉಚಿತವಾಗಿ ನೀಡಿರುವೆ. ಇದೀಗ ಕರೊನಾ ಸೋಂಕು ತಗ್ಗುತ್ತಿದೆ ಎಂದು ಜನರು ಮೈಮರೆಯದೆ ಮತ್ತಷ್ಟು ಜಾಗೃತಿ ವಹಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಸೋಂಕಿತರ ಬಗ್ಗೆ ತಾತ್ಸಾರ ಮಾಡದೆ ಆತ್ಮಸ್ಥೈರ್ಯ ತುಂಬಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಗ್ಗೆ ಮಂಜುನಾಥ್, ಕಾರ್ಯದರ್ಶಿ ಎ.ಎಂ. ರಘು, ಮುಖಂಡರಾದ ಕೆ.ಆರ್. ಹೊಯ್ಸಳ, ಪುಟ್ಟರಾಜು, ಹಂಡ್ರಂಗಿ ದಿಲೀಪ್ ಮುಂತಾದವರು ಹಾಜರಿದ್ದರು. ಕೋವಿಡ್ ಸೋಂಕಿತರಿಗೆ ಹಣ್ಣು ಹಂಪಲು ವಿತರಿಸಲಾಯಿತು.

                    ಸಂಪಾದಕ - ರವಿ

Post a Comment

0 Comments