ಅರಕಲಗೂಡು: ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಹಳ್ಳಿಗಳಲ್ಲಿ ಶೈಕ್ಷಣಿಕ ಪ್ರಗತಿಗೆ ಶ್ರಮ ವಹಿಸಿ ಗುಣಮಟ್ಟದ ಶಿಕ್ಷಣ ಕೊಡಿಸುವುದು ಪುಣ್ಯದ ಕಾಯಕವಾಗಿದೆ ಎಂದು ಅಮೆರಿಕದ ಸಾಫ್ಟ್ ವೇರ್ ಇಂಜಿನಿಯರ್ ಪ್ರಶಾಂತ್ ಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ರಾಗಿಮರೂರು ವರನಂದಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರಸ್ವತಿ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ಶಾಲಾ ವಾರ್ಷಿಕೋತ್ಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಹೆಚ್ಚಿನದಾಗಿ ರೈತಾಪಿ ವರ್ಗದ ಮಕ್ಕಳು ಕಲಿಯುತ್ತಿದ್ದು ಇಂತಹ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಲು ಎಲ್ಲರೂ ಕೈಜೋಡಿಸಬೇಕು.
ಬೇರೆಲ್ಲ ಸಹಾಯಗಳಿಗಿಂತ ಶಿಕ್ಷಣದ ಉನ್ನತಿಗೆ ಸಹಾಯ ಮಾಡಿದರೆ ಊರು ಉದ್ದಾರವಾಗಲಿದೆ. ನನ್ನ ಕೊನೆ ಉಸಿರಿರುವ ತನಕ ಶಾಲೆಗೋಸ್ಕರ ಶ್ರಮ ಹಾಕುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳು ಗುರಿ ಸಾಧನೆಗೆ ಸತತ ಪರಿಶ್ರಮ ಹಾಕಬೇಕು. ಅಮೆರಿಕದಲ್ಲಿ ಮಕ್ಕಳು ಊಟದ ಬಾಕ್ಸ್ ಅಷ್ಟೆ ಶಾಲೆಗೆ ಕೊಂಡೊಯ್ಯುತ್ತಾರೆ. ಪುಸ್ತಕಗಳು ಇಲ್ಲ, ಹೋಂ ವರ್ಕ್ ಕೂಡ ಇರಲ್ಲ. ಅಲ್ಲಿ ಪ್ರಾಜೆಕ್ಟ್, ಪ್ರಾಯೋಗಿಕ ತರಗರಿಗಳು ನಡೆಯಲಿದ್ದು ಚಿಕ್ಕ ಮಕ್ಕಳಿಗೂ ಲ್ಯಾಪ್ ಟಾಪ್ ಇರಲಿದೆ ಎಂದರು.
ಬೆಂಗಳೂರಿನ ನಾರ್ಥ್ ಗೆಸ್ಟ್ ಸ್ಕೂಲ್ ಕಾರ್ಯದರ್ಶಿ ರತ್ನ ಚಂದ್ರಶೇಖರ್ ರೆಡ್ಡಿ ಮಾತನಾಡಿ, ಹಳ್ಳಿಗಳ ಶಾಲೆಯಲ್ಲಿ ಶಿಕ್ಷದೊಂದಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರವೂ ಸಿಗಲಿದೆ. ಶಿಕ್ಷಕರಷ್ಟೆ ಮಕ್ಕಳು ಕಲಿಯಲು ಮನೆಯ ವಾತಾವರವೂ ಚೆನ್ನಾಗಿರಬೇಕು. ಮಕ್ಕಳಿಗೆ ಮೊಬೈಲ್ ಬಳಸುವ ರೀತಿಯ ಕುರಿತು ತಿಳುವಳಿಕೆ ನೀಡಬೇಕು. ಮಕ್ಕಳಿಗೆ ಬ್ಯಾಗ್ ಹೊರೆ ತಪ್ಪಿಸುವುದಾಗಿ ಸರ್ಕಾರ ಹೇಳಿಕೆ ಭಾಷಣಕ್ಕಷ್ಟೆ ಸೀಮಿತವಾಗಿದೆ ಎಂದರು. ಗ್ರಾಮೀಣ ಭಾಗದ ಈ ಶಾಲೆಗೆ ನನ್ನ ಸಹಕಾರವೂ ಇರಲಿದೆ ಎಂದರು.
ವಿದ್ಯಾಸಂಸ್ಥೆ ಅಧ್ಯಕ್ಷ ಗೋವಿಂದೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲಾಗುತ್ತಿದೆ. ಈ ಬಾರಿಯೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಜೆ ಟ್ಯೂಷನ್ ತೆಗೆದುಕೊಂಡು ಉತ್ತಮ ಫಲಿತಾಶ ಗಳಿಸಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಒಕ್ಕಲಿಗ ಸಮುದಾಯದ ಕೆಲವು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಹೆಚ್ಚಿನ ಆಸಕ್ತಿ ತೋರುತ್ತಾರೆ.ಆದರೆ ಪ್ರಶಾಂತ್ ಗೌಡ ಅವರು ರಾಗಿಮರೂರು ಗ್ರಾಮದಲ್ಲಿ ಐದು ಲಕ್ಷ ರೂ ವೆಚ್ಚದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಬೃಹತ್ ಕಂಚಿನ ಪ್ರತಿಮೆ ಸ್ಥಾಪಿಸಿ ಅಂಬೇಡ್ಕರ್ ಅವರ ಸಮ ಸಮಾಜದ ಕನಸು ನನಸು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಶಾಲೆಯ ಕಾರ್ಯದರ್ಶಿ ಕೆ.ಆರ್. ಕಲ್ಪತರು ವಾರ್ಷಿಕ ವರದಿ ಮಂಡಿಸಿದರು. ಹಾಸನ ಲೆಕ್ಕ ಪರಿಶೋಧನೆ ಉಪ ನಿರ್ದೇಶಕ ಡಾ. ಅಶೋಕ್, ಗ್ರಾಪಂ ಸದಸ್ಯರಾದ ಮಹೇಶ್, ಮರೀಗೌಡ, ಶಾಲಾ ನಿರ್ದೇಶಕರಾದ ಜಿ.ಎನ್. ಸರಸ್ವತಿ, ನಿರ್ಮಲಾ ರಮೇಶ್, ಮುಖ್ಯ ಶಿಕ್ಷಕ ವೈ.ಡಿ. ಲಕ್ಷ್ಮಣ್, ಜಗದೀಶ್ ಇತರರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
0 Comments