ಅಧಿಕಾರಿಗಳ ಸಭೆ, ಅಂಬೇಡ್ಕರ್ ಭವನ ಕಾಮಗಾರಿ ಪರಿಶೀಲಿಸಿದ ಶ್ರೇಯಸ್ ಪಟೇಲ್

ಅರಕಲಗೂಡು: ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರದ ಗಮನ ಸೆಳೆಯುವುದಾಗಿ ಸಂಸದ ಶ್ರೇಯಸ್ ಪಟೇಲ್ ಭರವಸೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಅಂಬೇಡ್ಕರ್ ಭನದ ಕಾಮಗಾರಿ ಅಪೂರ್ಣಗೊಂಡಿರುವ ಕುರಿತು ಸಮುದಾಯದ ಮುಖಂಡರ ಮನವಿ ಆಲಿಸಿದ ಬಳಿಕ ಭವನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಾನು ಜಿಪಂ ಸದಸ್ಯನಾಗಿದ್ದ ಕಾಲದಿಂದಲೂ ಭವನದ ಕಾಮಗಾರಿ ಮುಗಿಯದೆ ಕುಂಟುತಿದೆ. ಭವನದ ಕಾಮಗಾರಿ ಪೂರ್ಣವಾಗದ ಬಗ್ಗೆ ಬಹಳ ಬೇಸರವಿದೆ. ಭವನದ ಕಾಮಗಾರಿಗಾಗಿ 3 ಕೋಟಿ ರೂ ಅನುದಾನ ಒದಗಿಸುವಂತೆ ಜಿಪಂ ಇಂಜಿನಿಯರ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಭವನದ ಕಾಮಗಾರಿಗೆ ಅನುದಾನ ಕೊಡಿಸುವುದಾಗಿ ತಿಳಿಸಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ.‌ ಶ್ರೀಧರ್ ಗೌಡ ಮಾತನಾಡಿ, ದಶಕಗಳಿಂದಲೂ ಅಂಬೇಡ್ಕರ್ ಭವನದ ಕಾಮಗಾರಿ ಮುಗಿಯದಿರುವುದು ದುರಾದೃಷ್ಟಕರ, ಇದರಿಂದ ಬಡ ವರ್ಗದ ಜನರು ಮದುವೆ ಮತ್ತಿತರ ಶುಭ ಕಾರ್ಯಗಳನ್ನು ಕೈಗೊಳ್ಳಲು ಇನ್ನಿಲ್ಲದ ತೊಂದರೆಗೆ ಅನುಭವಿಸುವಂತಾಗಿದೆ. ಭವನ ಇಲ್ಲದೆ ಖಾಸಗಿ ಕಲ್ಯಾಣ ಮಂಟಪಗಳಲ್ಲಿ ದುಬಾರಿ ಬಾಡಿಗೆ ತೆರುವಂತಾಗಿದೆ. ಸಮುದಾಯದ ಮುಖಂಡರು ಈ ಕುರಿತು ನನ್ನ ಗಮನಕ್ಕೆ ತಂದಿದ್ದಾರೆ. ಭವನದ ಕಾಮಗಾರಿ ಪೂರ್ಣವಾದರೆ ಅನುಕೂಲವಾಗಲಿದೆ ಎಂದರು.
ಅಧಿಕಾರಿಗಳ ಸಭೆ: ಇದಕ್ಕೂ ಮುನ್ನ ಸಂಸದ ಶ್ರೇಯಸ್ ಪಟೇಲ್ ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಇಲಾಖಾವಾರು ಪ್ರಗತಿ ಪರಿಶೀಲಿಸಿದರು.
ತಾಲೂಕಿನಲ್ಲಿ ಕಾಡಾನೆಗಳ ಹಾವಳಿಯಿಂದ ಆಗಿರುವ ಹಾನಿ ಕುರಿತು ಅರಣ್ಯಾಧಿಕಾರಿ ಶಂಕರ್ ಅವರಿಂದ ಮಾಹಿತಿ ಪಡೆದರು. ಮಲ್ಲಿಪಟ್ಟಣ ಮತ್ತು ಕೊಣನೂರು ಹೋಬಳಿಯಲ್ಲಿ ಕೊಡಗಿನ ಗಡಿ ಭಾಗದಿಂದ ಬಂದ ಕಾಡಾನೆಗಳು ದಾಳಿ ನಡೆಸುತ್ತಿದ್ದರು ರೈತರ ಬೆಳೆಗಳನ್ನು ತುಳಿದು ನಾಶಪಡಿಸುತ್ತಿವೆ. ಬೆಳೆ ಹಾನಿ ಕುರಿತು ರೈತರಿಂದ ಮನವಿ‌ ಸ್ವೀಕರಿಸಲಾಗಿದೆ. ರೈತರಿಗೆ 12 ಲಕ್ಷ ರೂ ಬೆಳೆ ಹಾನಿ ಪರಿಹಾರ ನೀಡಬೇಕಿದ್ದು ಈ ಪೈಕಿ 2.5 ಲಕ್ಷ ಪರಿಹಾರ ಒದಗಿಸಲಾಗಿದೆ ಎಂದರು. ಕಾಡಾನೆಗಳ ದಾಳಿ ತಡೆಗಟ್ಟಲು ರೆಡಿಯೋ ಕಾಲರ್ ಅಳವಡಿಸುವಂತೆ ಸಂಸದರು ಸೂಚಿಸಿದರು.
ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ
ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಪ್ರಗತಿ ಕುರಿತು ಜೆಜೆಎಂ ಸಹಾಯಕ ಇಂಜಿನಿಯರ್ ನವೀನ್ ಅವರಿಂದ ಮಾಹಿತಿ ಪಡೆದರು.
ತಾಲೂಕಿನಲ್ಲಿ ಯೋಜನೆ ಪ್ರಗತಿಯಲ್ಲಿದ್ದು ಕಸಬಾ ಹೋಬಳಿಯ ಬೈಚನಹಳ್ಳಿ, ಹೆಬ್ಬಾಲೆ, ವಡ್ಡರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ತಡವಾಗುತ್ತಿದೆ ಎಂದು ಇಂಜಿನಿಯರ್ ನವೀವ್ ಸಭೆಗೆ ತಿಳಿಸಿದರು.
ಗುತ್ತಿಗೆದಾರರ ಮೇಲೆ ಒತ್ತಡ ತಂದು ಎಲ್ಲಾ ಕಡೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು. ಇದು ಉತ್ತಮ ಯೋಜನೆಯಾಗಿದ್ದು ಕಾಮಗಾರಿಯಲ್ಲಿ ಲೋಪವಾಗದಂತೆ ನಿಗಾ ವಹಿಸಬೇಕು ಎಂದು ಸಂಸದರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕೊಠಡಿಗಳ ಕೊರತೆ ಕುರಿತು ಬಿಇಒ ನಾರಾಯಣ್ ಹಾಗೂ ಸಿಡಿಪಿಒ ವೆಂಕಟೇಶ್ ಅವರಿಂದ ಮಾಹಿತಿ ಪಡೆದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಕ್ರಮ ವಲಸೆ ಕಾರ್ಮಿಕ ಹಾವಳಿ ಹೆಚ್ಚಿದ್ದು ಈ ಬಗ್ಗೆ ಪೊಲೀಸರು ನಿಗಾ ವಹಿಸಬೇಕು ಎಂದರು. ವಲಸೆ ಕಾರ್ಮಿಕರ ಕುರಿತು ಸೂಕ್ತ ಮಾಹಿತಿ ಸಿಗುತ್ತಿಲ್ಲ ಎಂದು ಸಬ್ ಇನ್ಸ್ ಪೆಕ್ಟರ್ ಕಾವ್ಯ ಸಭೆಗೆ ತಿಳಿಸಿದರು. ವಲಸೆ ಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ಮಾಲೀಕರ ಸಭೆ ಕರೆದು ಸೂಕ್ತ ಮಾಹಿತಿ ಒದಗಿಸುವಂತೆ ಹಾಗೂ ಮುಂದಾಗುವ ಅನಾಹುತಕ್ಕೆ ಅವರನ್ನೇ ಹೊಣೆ ಮಾಡುವ ಕುರಿತು ಎಚ್ಚರಿಕೆ ನೀಡುವಂತೆ ಸಬ್ ಇನ್ಸ್ ಪೆಕ್ಟರ್ ಗೆ ಸೂಚನೆ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ಮಾತನಾಡಿ, ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಸಮರ್ಪಕವಾಗಿಲ್ಲ. ಎರಡರಿಂದ ಐದು ಕೆಜಿ ಅಕ್ಕಿ ಕಡಿಮೆ ವಿತರಿಸುತ್ತಿರುವ ಕುರಿತು ಸಾಕಷ್ಟು ದೂರುಗಳಿಗೆ. ಈ ದಂದೆ ತಪ್ಪಿಸಲು ಅಂತಹ ನ್ಯಾಯ ಬೆಲೆ ಅಂಗಡಿಗಳನ್ನು ಗುರುತಿಸಿ ಪರವಾನಿಗೆ ರದ್ದು ಪಡಿಸಬೇಕು ಎಂದರು.
ಈ ಬಗ್ಗೆ ತುರ್ತು ಕ್ರಮ ವಹಿಸುವಂತೆ ತಹಸೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಸಂಸದರು ಸೂಚಿಸಿದರು.
ಆಸ್ಪತ್ರೆಗೆ ಭೇಟಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಶ್ರೇಯಸ್ ಪಟೇಲ್ ಅವರು, ಹೆರಿಗೆ ವಿಭಾಗ, ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿದರು. ರೋಗಿಗಳ ಆರೋಗ್ಯ ವಿಚಾರಿಸಿದರು. ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಡಿ ದರ್ಜೆ ನೌಕರರು ಆಸ್ಪತ್ರೆಗೆ ಬರುವ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ದೂರುಗಳಿವೆ. ಇಂತವರ ಬಗ್ಗೆ ನಿಗಾ ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸಾತ್ಮಕ ಸೌಲಭ್ಯಗಳು ದೊರೆಯುವಂತೆ ಕ್ರಮ ವಹಿಸಬೇಕು ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ದೀಪಕ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಅವರಿಗೆ ಸೂಚನೆ ನೀಡಿದರು.

Post a Comment

0 Comments