ಅರಕಲಗೂಡು: ಜಾತಿ ಧರ್ಮದ ಬೇಧ ಎಣಿಸದೆ ಭಾರತೀಯತೆ ಆಧ್ಯಾತ್ಮವನ್ನು ಜಗತ್ತಿಗೆ ಪಸರಿಸಿದ ಸ್ವಾಮಿ ವಿವೇಕಾನಂದ ಅಖಂಡ ವಿಶ್ವದ ಸಾದು ಎಂದು ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ ನುಡಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಸಮಾಜ ವಿಜ್ಞಾನ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತದ ಮೇಲೆ ಅನೇಕರು ದಂಡೆತ್ತಿ ದಾಳಿ ಮಾಡಿದರೂ ಮೂಲ ಸಂಸ್ಕೃತಿ ಅಳಿಸಲಾಗಲಿಲ್ಲ.
ರಾಮಕೃಷ್ಣ ಪರಮ ಹಂಸರು ವಿವೇಕಾನಂದರ ಮೂಲಕ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ವಿಶಕ್ಕೆ ಸಾರಿದರು. ಶಿಕ್ಷಕರಿಂದ ಬದಲಾವಣೆ ಸಾಧ್ಯ. ಮಕ್ಕಳನ್ನು ವಿವೇಕಾನಂದರ ರೀತಿ ಬೆಳೆಸಬೇಕು. ಯುವಕರು ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಕೆಲ ರಾಜಕಾರಣಿಗಳ ನಡೆಯಿಂದಾಗಿ ಸಮಾಜ ದಿಕ್ಕು ತಪ್ಪುತ್ತಿದೆ. ಪೂರ್ವಜರು ಉಳಿಸಿ ಹೋದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ದು ಸ್ವಸ್ಥ ಆರೋಗ್ಯಕರ ಸಮಾಜ ನಿರ್ಮಿಸಲು ಸಮಿತಿ ಶ್ರಮಿಸುತ್ತಿದೆ ಎಂದರು.
ಕೊಣನೂರು ಬಿ.ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ.ಆರ್. ರವಿಕುಮಾರ್ ಮಾತನಾಡಿ, ಉಪನಿಷತ್ತುಗಳಲ್ಲಿ ಅಡಕವಾಗಿದ್ದ ಆಳವಾದ ವೈಚಾರಿಕ ವಿಚಾರಗಳನ್ನು ವಿಶ್ವಕ್ಕೆ ಸಾರಿದ ವಿವೇಕಾನಂದರು ಅಖಂಡ ಭಾರತದ ಕನಸು ಕಂಡಿದ್ದರು. ರಾಷ್ಟ್ರ ನಿರ್ಮಾಣ ದಲ್ಲಿ ಹಾಗೂ ಕೆಟ್ಟಿರುವ ಸಮಾಜವನ್ನು ಸರಿದಾರಿಗೆ ತರುವಲ್ಲಿ ಯುವಕರು ಮತ್ತು ಶಿಕ್ಷಕರ ಪಾತ್ರ ಹಿರಿದು. ಮುಖ್ಯವಾಗಿ ವಿವೇಕಾನಂದರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಬಸವರಾಜು ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿಯಾಗಿದ್ದರು ಎಂದರು.
ಶಿಕ್ಷಕರಾದ ಬಸವರಾಜಪ್ಪ, ವಿಶ್ವೇಶ್ವರಯ್ಯ ಮಾತನಾಡಿದರು. ತಾಪಂ ಮಾಜಿ ಸದಸ್ಯರಾದ ಪಾಂಡುರಂಗ, ಬಿ.ಸಿ. ವೀರೇಶ್,ಎಚ್. ಮಾದೇಶ್, ಸಿದ್ದರಾಮೇಗೌಡ, ಪಪಂ ಮಾಜಿ ಅಧ್ಯಕ್ಷರಾದ ಕೃಷ್ಣಯ್ಯ, ಲೋಕೇಶ್, ಮಾಜಿ ಉಪಾಧ್ಯಕ್ಷೆ ರಶ್ಮಿ, ವಕೀಲ ಶಂಕರಯ್ಯ, ಮುಖಂಡರಾದ ದಿನೇಶ್ ಬಾಬು, ದಡದಹಳ್ಳಿ ಜಗದೀಶ್, ಸೋಮಣ್ಣ, ನಸ್ರುಲ್ಲಾ ಟಿಪ್ಪು, ಸತೀಶ್, ಈರಾಜು, ದಶರಥ, ವೆಂಕಟೇಶ್ ಇತರರಿದ್ದರು. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಏನು ಎನ್ನುವ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಾಜ ವಿಜ್ಞಾನ ಶಿಕ್ಷಕರನ್ನು ಸನ್ಮಾನಿಸಲಾಯಿತು.
0 Comments