ಜನ ಕಲ್ಯಾಣದ ಐದು ಗ್ಯಾರಂಟಿಗಳ ಸಾಕಾರಕ್ಕೆ ಇನ್ನಷ್ಟು ಬಿಗಿ ಕ್ರಮ ವಹಿಸಿದ ಸಮಿತಿ ಅಧ್ಯಕ್ಷ ಶ್ರೀಧರ್ ಗೌಡ

ಅರಕಲಗೂಡು: ದೇಶದೆಲ್ಲೆಡೆ ವ್ಯಾಪಕವಾಗಿ ಚರ್ಚೆಯಲ್ಲಿರುವ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗಾಗಿ ಈ ಒಂದು ತಾಲೂಕಿಗೆ 249.92 ಕೋಟಿ ರೂ ಹಣ ವ್ಯಯಿಸಿ ಜಾತಿ ಮತಗಳ ಬೇಧವಿಲ್ಲದೆ ಪಕ್ಷಾತೀತವಾಗಿ ಜನರ ಕಲ್ಯಾಣಕ್ಕಾಗಿ ಶ್ರಮಿಸಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ತಿಳಿಸಿದರು.

ತಾಲೂಕಿನ ಚಿಕ್ಕಹಳ್ಳಿ ಗ್ರಾಮ ಪಂಚಾಯತಿಯ ವಿ.ಜಿ.ಕೊಪ್ಪಲು ಗ್ರಾಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಐದು ಯೋಜನೆ ಫಲಾನುಭವಿಗಳ ಕುಂದು ಕೊರತೆ ಹಾಗೂ ಜನ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಸಿವಿನಿಂದ ಯಾರೂ ಮಲಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆಯಡಿ ತಾಲೂಕಿಗೆವ1.90 ಕೋಟಿ ಕ್ವಿಂಟಾಲ್ ಅಕ್ಕಿ ಸರಬರಾಜು ಆಗಿದ್ದು 37.38 ಕೋಟಿ ರೂ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನ 5183 ಯಜಮಾನಿಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂ ನಂತೆ ಈತನಕ 145.10 ಕೋಟಿ ರೂ ಹಾಗೂ 54805 ಮನೆಗಳಿಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲು 25.77 ಕೋಟಿ ರೂ ಹಣವನ್ನು ಸೆಸ್ಕ್ ಗೆ ಪಾವತಿಸಿದೆ.

 ಶಕ್ತಿ ಯೋಜನೆಯಡಿ ತಾಲೂಕಿನ ಅರಕಲಗೂಡು, ರಾಮನಾಥಪುರ ಬಸ್ ಡಿಪೋ ಗಳಿಗೆ 67.27 ಕೋಟಿ ರೂ ಪಾವತಿಸಿದೆ. ಇದರಿಂದ ಆರೋಗ್ಯ ಸರಿಯಿಲ್ಲದೆ ನರಳುತ್ತಿದ್ದ ಮಹಿಳೆಯರು, ವೃದ್ಧರು ಬೆಂಗಳೂರು ಮತ್ತಿತರೆಡೆ ಆಸ್ಪತ್ರೆಗಳಿಗೆ ತೆರಳಿ ಗುಣಮಟ್ಟದ ಚಿಕಿತ್ಸೆ ಪಡೆಯುವಂತಾಗಿದೆ. ಯುವನಿಧಿ ಯೋಜನೆಯಡಿ 279 ಮಂದಿ ನಿರುದ್ಯೋಗಿಗಳಿಗೆ ನೆರವಾಗಿದೆ. ಐದು ಯೋಜನೆಗಳಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದೆ. 

ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಸಿಗುವ ಎರಡು ಸಾವಿರ ರೂ ಹಣದಿಂದ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮತ್ತು ಕುಟುಂಬದ ಕಾರ್ಯಗಳಿಗೆ ವ್ಯಯಿಸಿದ್ದು ಯೋಜನೆ ಸಾರ್ಥಕವಾಗಿದೆ. ದೇಶದ ಕೆಲವು ರಾಜ್ಯಗಳು ಇದೇ ಯೋಜನೆಗಳನ್ನು ಅಳವಡಿಸಿಕೊಂಡಿವೆ. ಎಲ್ಲೋ ಒಂದಿಷ್ಟು ಮಂದಿ ಮಾಡುವ ಅಪಪ್ರಚಾರಗಳಿಗೆ ಕಿವಿಗೊಡದೆ ಫಲಾನುಭವಿಗಳು ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಕೆ.ಸಿ. ಸೌಮ್ಯ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಮಹತ್ವದ್ದಾಗಿದ್ದು ಲೋಪದೋಷಗಳಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಕೊರತೆಗಳನ್ನು ನಿವಾರಿಸಿಕೊಳ್ಳಬೇಕು. ಮುಖ್ಯವಾಗಿ ನಿಮ್ಮ ಭಾಗವಹಿಸುವಿಕೆಯಿಂದ ಯೋಜನೆಗಳು ಸಾಕಾರಗೊಳ್ಳಲಿವೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯದರ್ಶಿ ತಾಪಂ ಇಒ ಪ್ರಕಾಶ್, ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಿನ್ನಸ್ವಾಮಿ, ಆಹಾರ ಇಲಾಖೆ ಶಿರಸ್ತೇದಾರ್ ಮಂಜುನಾಥ್, ಡಿಪೋ ವ್ಯವಸ್ಥಾಪಕ ಹನುಮಂತಪ್ಪ, ಜಿಲ್ಲಾ ಉದ್ಯೋಗಾಧಿಕಾರಿ ಜಯಲಕ್ಷ್ಮೀ ಇಲಾಖಾವಾರು ಯೋಜನೆಯ ಮಾಹಿತಿ ನೀಡಿದರು.
ತಾಲೂಕು ಕಚೇರಿ ಶಿರಸ್ತೇದಾರ್ ಸಿ. ಸ್ವಾಮಿ, ಉಪ ತಹಸೀಲ್ದಾರ್ ಕುಮಾರ್, ಕೊಣನೂರು ಸೆಸ್ಕ್ ಸಹಾಯಕ ಇಂಜಿನಿಯರ್ ಯೋಗೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಬಿ.ಪಿ. ವೀರೇಶ್, ಸೋಮಶೇಖರ್, ನಾಗರಾಜು, ರಾಜೇಶ್, ವೀಣಾ, ಸತ್ಯರಾಜ್, ಶ್ರೀಕಾಂತ್, ಗ್ರಾಪಂ ಅಧ್ಯಕ್ಷೆ ಯಶೋಧ ಕೃಷ್ಣ, ಪಿಡಿಒ ಮನು, ಸದಸ್ಯರು ಇದ್ದರು.

ಸಭೆಯಲ್ಲಿ ಕೇಳಿಸಿದ್ದು: 
ಗೃಹಜ್ಯೋತಿ ಯೋಜನೆ ಜಾರಿಗೊಂಡರೂ ಮನೆಗಳಿಗೆ ಮೊದಲಿಗಿಂತಲೂ ದುಪ್ಪಟ್ಟು ವಿದ್ಯುತ್ ಬಿಲ್ ಬರೆ ಎಳೆಯಾಗುತ್ತಿದೆ. ಬಿಲ್ ಪಾವತಿಸುವುದು ಹೊರೆಯಾಗುತ್ತಿದ್ದು ಯೋಜನೆ ತಮ್ಮ ಪಾಲಿಗೆ ಇದ್ದೂ ಇಲ್ಲವಾಗಿದೆ ಎಂದು ಸಭೆಯಲ್ಲಿ ಕೆಲವು ಮಹಿಳೆಯರು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ಶ್ರೀಧರ್ ಗೌಡ ಅವರು ಹೆಚ್ಚುವರಿ ಕಿಲೋ ವಿದ್ಯುತ್ ಗೆ ಹೆಚ್ಚಿನ ದಂಡ ವಿಧಿಸಲಾಗುತ್ತಿದೆ. ವಿದ್ಯುತ್ ಗುತ್ತಿಗೆದಾರರ ಬಳಿ ವಿದ್ಯುತ್ ಬಳಕೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಐದು ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಸಮಸ್ಯೆಗಳಿದ್ದರೆ ಇಲಾಖೆ ಅಧಿಕಾರಿಗಳು ಖುದ್ದು ಮನೆ ಬಾಗಿಲಿಗೆ ತೆರಳಿ ಪರಿಹಾರ ಒದಗಿಸಬೇಕು. ಇದಕ್ಕಾಗಿ ಫಲಾನುಭವಿಗಳ ಏನೇ ಕುಂದು ಕೊರತೆಗಳಿದ್ದರೆ ನನ್ನ ಗಮನಕ್ಕೆ ತಂದರೆ ಇಲಾಖೆಗಳಿಗೆ ಅಲೆಯುವುದು ತಪ್ಪಲಿದೆ ಎಂದರು. 

ಸಭೆಯಲ್ಲಿ ಸಲ್ಲಿಕೆಯಾದ 255 ಅರ್ಜಿಗಳ ಪೈಕಿ 203 ಅರ್ಜಿದಾರರಿಗೆ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿದ ಸಮಿತಿ ಅಧ್ಯಕ್ಷ ಶ್ರೀಧರ್ ಗೌಡ ಅವರು ಉಳಿಕೆ 52 ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Post a Comment

0 Comments