ಅರಕಲಗೂಡು: ಡಿಬಲ್ ಇಂಜಿನ್ ಸರ್ಕಾರ ಎನ್ನುವ ಬಿಜೆಪಿಯವರು ಮಾಡಿರೋ ಅಭಿವೃದ್ಧಿ ಏನು? ಬರೀ ಲಂಚ ಲಂಚ! ನನ್ನ 44 ವರ್ಷಗಳ ರಾಜಕೀಯ ಜೀವನದಲ್ಲಿ ಬಿಜೆಪಿಯಂತಹ ಭ್ರಷ್ಟ ಸರ್ಕಾರವನ್ನು ಯಾವತ್ತೂ ನೋಡಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ರಾಮನಾಥಪುರ ಹೋಬಳಿಯ ಬಿಳಗೂಲಿ ಗ್ರಾಮದಲ್ಲಿ ಸ್ಥಾಪಿಸಿರುವ ಕನಕದಾಸರು ಮತ್ತು ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಉದ್ಘಾಟಿಸಿ, ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯಂತ ಭ್ರಷ್ಟಾಚಾರಿಗಳು, ವಚನ ಭ್ರಷ್ಟರು ರಾಜ್ಯದ ಇತಿಹಾಸದಲ್ಲಿ ಯಾರು ಬಂದಿರಲಿಲ್ಲ. ಬಿಜೆಪಿ ಬರೀ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ವಿಧಾನಸೌಧಡ ಗೋಡೆಗಳು ಲಂಚದ ಪಿಸುಗುಡುತ್ತಿವೆ: ರಾಜ್ಯದ ಇತಿಹಾಸದಲ್ಲಿ ಯಾರೊಬ್ಬರಾದರೂ ಶೇ. 40 ಪರ್ಸೆಂಟ್ ಕಮಿಷನ್ ಸರ್ಕಾರವೆಂದು ಹೇಳಿದ್ರ?. ಈ ಕುರಿತು ಕಾಂಟ್ರಾಕ್ಟರ್ ಅಶೋಸಿಯೇಷನ್ ಅವರು 40 ಪರ್ಸೆಂಟ್ ನಿಂದ ನಮ್ಮನ್ನು ಉಳಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೂ ಮೋದಿ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಎಲ್ಲಾ ಇಲಾಖೆಯಲ್ಲೂ ಲಂಚ ತಾಂಡವವಾಡುತ್ತಿದೆ. ವಿಧಾನಸೌಧದ ಗೋಡೆಗಳು ಲಂಚ, ಲಂಚ ಎಂದು ಪಿಸುಗುಡಲು ಆರಂಭಿಸಿವೆ ಎಂದು ಟೀಕಿಸಿದರು.
ಹಿಂಭಾಗಿಲಿಂದ ಅಧಿಕಾರಕ್ಕೆ: ರಾಜಕಾರಣದಲ್ಲಿ ಇಂದು ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬರಲಿಲ್ಲ. ಬದಲಾಗಿ ಆಪರೇಷನ್ ಕಮಲದ ಮೂಲಕ ಕೋಟ್ಯಂತರ ರು. ಖರ್ಚು ಮಾಡಿ, ಶಾಸಕರನ್ನು ಖರೀದಿಸಿ ಹಿಂಭಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದು, ಲೂಟಿ ಹೊಡೆಯುವಲ್ಲಿ ನಿರತವಾಗಿದೆ ಎಂದರು.
ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿಯುತ್ತದೆ: ಜೆಡಿಎಸ್ ಬಗ್ಗೆ ಮಾತನಾಡಲ್ಲ. ಕಾರಣ, ಅವರೇನು ಅಧಿಕಾರಕ್ಕೆ ಬರುವವರಲ್ಲ. ಅವರು ಗೆದ್ದೆತ್ತಿನ ಬಾಲ ಹಿಡಿಯುವವರು. ಅವರಿಂದ ರಾಜ್ಯಕ್ಕೆ ಒಳ್ಳೆಯದಾಗಲ್ಲ ಎಂದರು.
ಧಮ್ ಇದ್ರೆ ಚರ್ಚೆಗೆ ಬರಲಿ: ದೇಶಕ್ಕೆ ಸ್ವತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಹೊರತು, ಬಿಜೆಪಿ, ಆರ್ಎಸ್ಎಸ್, ಸಂಘಪಾರಿವಾರವಲ್ಲ. ಡಿ. ದೇವರಾಜ ಅರಸು ಅವರನ್ನು ಬಿಟ್ಟರೆ ನಾನೇ 5 ವರ್ಷ ಮುಖ್ಯಮಂತ್ರಿಯಾಗಿದ್ದು. ನಾವು 2013ರಲ್ಲಿ ನೀಡಿದ್ದ 165 ಭರವಸೆಗಳಲ್ಲಿ 159 ಈಡೇರಿಸಿದ್ದೇವೆ. ಆದರೆ, 2018ರಲ್ಲಿ ಬಿಜೆಪಿ ನೀಡಿದ್ದ 600 ಭರವಸೆಗಳಲ್ಲಿ ಶೇ.10ರಸ್ಟನ್ನು ಈಡೇರಿಸಿಲ್ಲ. ಈ ಕುರಿತು ಚರ್ಚಿಸಲು ವೇದಿಕೆಗೆ ಬನ್ನಿ ಎಂದು ಕರೆದರೂ ಬರಲು ಬಿಜೆಪಿಗೆ ಧಮ್ ಇಲ್ಲ. ತಾಕತ್ ಇಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾತೆತ್ತಿದರೆ ಧಮ್ ಇದ್ರೆ, ತಾಕತ್ ಇದ್ರೆ ಎನ್ನುತ್ತಾರೆ. ಬನ್ನಿ ತೋರಿಸಿ ಧಮ್, ತಾಕತ್ತು ಎಂದು ಸವಾಲೆಸೆದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಹಾಗೂ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದ ಅವರು, ಈ ಭಾರೀ ಕಾಂಗ್ರೆಸ್ ನಿಂದ ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸಬೇಕು. ನೀವು ಹಾಕುವ ಓಟು ನನಗೆ ಹಾಕಿದಂತಾಗುತ್ತದೆ. ಹಾಗಾಗಿ ಈ ಭಾರೀ ಬಿಜೆಪಿ, ಜಿಡಿಎಸ್ ಕಿತ್ತೊಗೆದು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಎಚ್. ಸಿ. ಮಹದೇವಪ್ಪ, ಮುಖಂಡರಾದ ಭೈರತಿ ಸುರೇಶ್ ಬಿಜೆಪಿ ಆಡಳಿಯ ಟೀಕಿಸಿದರು.
0 Comments