ಅರಕಲಗೂಡು: ಎಲ್ಲರಿಗೂ ಟಿಕೆಟ್ ಕೊಡೊಕ್ಕಾಗಲ್ಲ, ಯಾರಿಗೆ ಕೊಟ್ಟರೂ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅಭ್ಯರ್ಥಿಯನ್ನು ಒಗ್ಗಟ್ಟಿನಿಂದ ಗೆಲ್ಲಿಸಿ ವಿಧಾನಸೌಧದಲ್ಲಿ ನನಗೆ ಶಕ್ತಿ ತುಂಬಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಟಾಘೋಷವಾಗಿ ಕರೆ ಕೊಟ್ಟರು.
ತಾಲೂಕಿನ ಬಿಳಗೂಲಿ ಗ್ರಾಮದಲ್ಲಿ ಶುಕ್ರವಾರ ಸಂತಶ್ರೇಷ್ಠ ಕನಕದಾಸರು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಆರು ಮಂದಿ ಅರ್ಜಿ ಸಲ್ಲಿಸಿದ್ದು ಕೃಷ್ಣೇಗೌಡ, ಡಾ. ದಿನೇಶ್ ಭೈರೇಗೌಡ, ವಿಜಯ್ ಕುಮಾರ್, ಶ್ರೀಧರ್ ಗೌಡ, ಶೇಷೇಗೌಡ ಅವರು ಆಕಾಂಕ್ಷಿಯಾಗಿದ್ದಾರೆ. ಆದರೆ ಕ್ಷೇತ್ರದಲ್ಲಿ ಯಾರ ಪರ ಜನರ ಒಲವಿದೆ ಎನ್ನುವ ಕುರಿತು ವರದಿ ಪಡೆಯಲಾಗುವುದು. ಏಪ್ರಿಲ್, ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಹಿಂದಿನ ಚುನಾವಣೆಗಳಲ್ಲಿ ನಾನು ಇಲ್ಲಿ ಬಂದು ಪ್ರಚಾರ ಮಾಡಿದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ. ಈ ಬಾರಿಯೂ ಪಕ್ಷ ಟಿಕೆಟ್ ನೀಡುವ ಅಭ್ಯರ್ಥಿ ಪರ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಆಶೀರ್ವದಿಸಿದರೆ ನನಗೆ ಶಕ್ತಿ ಕೊಟ್ಟಂತಾಗುತ್ತದೆ ಎಂದು ಜನರತ್ತ ಕೈಬೀಸಿ ಕೇಳಿಕೊಂಡರು.
ರಾಜ್ಯ ರಾಜಕಾರಣದಲ್ಲಿ ಇಷ್ಟೊಂದು ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಲು ಬಿಜೆಪಿ ಕಾರಣ, ಜನರ ಆಶೀರ್ವಾದ ದಿಂದ ಅಧಿಕಾರಕ್ಕೆ ಬಾರದೆ ಆಪರೇಷನ್ ಕಮಲ ನಡೆಸಿ ಹಿಂಭಾಗಿಲಿನಿಂದ ಅಧಿಕಾರಕ್ಕೆ ಬಂದು ಲೂಟಿಯಲ್ಲಿ ತೊಡಗಿದೆ. 44 ವರ್ಷಗಳ ನನ್ನ ರಾಜಕಾರಣದಲ್ಲಿ ಇಂಥ ಭ್ರಷ್ಟ ಸರ್ಕಾರ ನೋಡಿರಲಿಲ್ಲ. ಜೆಡಿಎಸ್ ಬಗ್ಗೆ ನಾಣು ಮಾತನಾಡಲ್ಲ. ಅವರೇನು ಯಾವತ್ತು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲ್ಲ, ಗೆದ್ದಿತ್ತಿನ ಬಾಲ ಹಿಡಿಯುವವರು, ಜೆಡಿಎಸ್‌ನವರಿಂದ ರಾಜ್ಯಕ್ಕೆ ಒಳ್ಳೆಯದಾಗಲ್ಲ ಎಂದು ಲೇವಡಿ ಮಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ 165ರಲ್ಲಿ 158 ಭರವಸೆಗಳನ್ನು ಈಡೇರಿಸಿ ಐದು ವರ್ಷ ಜನಪರ ಆಡಳಿತ ನೀಡಿದೆ. ಆದರೆ ಬಿಜೆಪಿ ಸರ್ಕಾರ ಈಡೇರಿಸುವ ಭರವಸೆಗಳ ಕುರಿತು ಬಹಿರಂಗ ಚರ್ಚೆಗೆ ಕರೆದದರೂ ಸಿಎಂ ಬಸವರಾಜ್ ಬೊಮ್ಮಾಯಿ ಬರುತ್ತಿಲ್ಲ. ಪ್ರಧಾನಿ ಮೋದಿ ರಾಜ್ಯಕ್ಕೆ ಕೊಡುಗೆ ನೀಡಲು ವಿಫಲವಾಗಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ಬಿಜೆಪಿ ಮತ್ತು ಆರ್ ಎಸ್ ಎಸ್ ಸ್ವಾತಂತ್ರ‍್ಯಕ್ಕಾಗಿ ಹೋರಾಡಿಲ್ಲ. ಕಾಂಗ್ರೆಸ್ ಸ್ವಾತಂತ್ರ‍್ಯಕ್ಕಾಗಿ ಶ್ರಮಿಸಿದೆ. ಈ ಬಾರಿ ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೆ ಸತ್ಯ. ಜನತೆ ಕಾಂಗ್ರೆಸ್ ಬೆಂಬಲಿಸಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್, 10 ಕೆಜಿ ಉಚಿತ ಅಕ್ಕಿ ನೀಡಲಾಗುವುದು ಎಂದು ಮನವಿ ಮಾಡಿದರು.
ಬಸವಾದಿ ಶರಣರು ಮತ್ತು ಕನಕದಾಸರು ವಚನಗಳು ಮತ್ತು ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದಲು ಶ್ರಮಿಸಿದ್ದಾರೆ. ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತ ಸಂಗೊಳ್ಳಿ ರಾಯಣ್ಣ ಅವರನ್ನು ನೇಣಿಗೇರಿಸಿದ ನಂದಗಡ ಬಳಿ 100 ಎಕರೆ ಜಾಗ ಅಭಿವೃದ್ಧಿ ಪಡಿಸಿ 272ಕೋಟಿ ಅನುದಾನವನ್ನು ನಾನು ಮುಖ್ಯ ಮಂತ್ರಿಯಾಗಿದ್ದಾಗ ಬಿಡುಗಡೆ ಮಾಡಿದ್ದೆ. ರಾಯಣ್ಣ ಸೈನಿಕ ಶಾಲೆ ಸ್ಥಾಪಿಸಲಾಗುತ್ತಿದೆ ಎಂದರು.
ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಮಾತನಾಡಿ, ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಧರ್ಮಧಾರಿತ ರಾಜಕಾರಣ ನಡೆಸುತ್ತಿರುವ ಬಿಜೆಪಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ. ಸಂವಿಧಾನ ಉಳಿಸಲು ಶೋಷಿತರು ಒಗ್ಗಟ್ಟಾಗುವ ಕಾಲ ಬಂದಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ಮಾತನಾಡಿ, ಸಮಾಜ ಸುಧಾರಕರಾದ ಕನಕದಾಸರನ್ನು ಸದಾ ಸ್ಮರಿಸಬೇಕು. ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದ ಜನತೆ ಮನಗಂಡಿದ್ದಾರೆ ಎಂದರು.
ಮುಖಂಡರಾದ ಎಚ್.ಕೆ. ಜವರೇಗೌಡ, ಬೈರತಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ರವೀಂದ್ರ ಮಾತನಾಡಿದರು. ಮುಖಂಡರಾದ ಮಂಜುನಾಥ್ ದತ್ತ, ಜಾವಗಲ್ ಮಂಜುನಾಥ್, ಎಚ್.ಎನ್. ವಿಜಯ್, ಡಾ. ದಿನೇಶ್ ಭೈರೇಗೌಡ, ಎಚ್.ಪಿ. ಶ್ರೀಧರ್‌ಗೌಡ, ವೈ.ಎನ್. ಕೃಷ್ಣೇಗೌಡ, ವಿನಯ್ ಗಾಂಧಿ, ರಘು, ಬಿ.ಕೆ. ರಂಗಸ್ವಾಮಿ, ಗಣೇಶ್ ವೇಲಾಪುರಿ, ಪಪಂ ಅಧ್ಯಕ್ಷೆ ಶಾರದಾ ಪ್ಲಥ್ವಿರಾಜ್, ಅನಿಕೇತನ್, ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಬಾಗ್ದಾಳು ಕಾಂತರಾಜು, ಕಳ್ಳಿಮುದ್ದನಹಳ್ಳಿ ಲೋಕೇಶ್, ಮರಡಿ ಸೋಮೇಶೇಖರ್, ಬಿಳಗೂಲಿ ರಾಮೇಗೌಡ, ಚಂದೇಗೌಡ, ಹುಚ್ಚೇಗೌಡ, ಎಸ್.ಪಿ. ರೇವಣ್ಣ, ಅನಿಲ್ ಕುಮಾರ್, ಮುತ್ತಿಗೆ ರಮೇಶ್, ಸುನಿಲ್, ಪಿರಿಯಾಪಟ್ಟಣ ಗಣೇಶ್, ನಿವೃತ್ತ ಜಿಲ್ಲಾಧಿಕಾರಿ ರಾಮೇಗೌಡ, ಶಿರೀನ್ ರಂಗಸ್ವಾಮಿ, ಸಂದೀಪ್, ರವೀಂದ್ರ ಇತರರಿದ್ದರು.
ಅನಾರೋಗ್ಯದಿಂದ ಗೈರಾಗಿದ್ದ ಕೃಷ್ಣೇಗೌಡರ ಸಹೋದರ ಎಂ.ಸಿ. ರಂಗಸ್ವಾಮಿ ಅವರು ರೈತ ಪರವಾಗಿ ಹಾಗೂ ಸಿದ್ದರಾಮಯ್ಯ ಅವರ ಸಾಧನೆ ಕುರಿತು ನೀಡಿದ ವಿಡಿಯೋ ಸಂದೇಶವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.
ಹೆಲಿಪ್ಯಾಡ್ ನಲ್ಲಿ ಆಗಮಿಸಿದ್ದ ಸಿದ್ದರಾಮಯ್ಯ ಅವರಿಗೆ ರಾಮನಾಥಪುರದಲ್ಲಿ ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು. ರಾಮನಾಥಪುರ ಸರ್ಕಲ್‌ನಲ್ಲಿ ಎಂ.ಟಿ. ಕೃಷ್ಣೇಗೌಡ ಅವರೊಂದಿಗೆ ಮೆರವಣಿಗೆಯಲ್ಲಿ ಬಂದ ಸಿದ್ದರಾಮಯ್ಯ ಅವರಿಗೆ ಕಾರ್ಯಕರ್ತರು ಹೂ ಮಳೆ ಸುರಿಸಿ ಕಂಬಳಿ ಹಾರ ಹಾಕಿ ಸಂಭ್ರಮಿಸಿದರು.
ಕಾರ್ಯಕ್ತಮದ ನಡುವೆ ಒಂದು ಹಂತದಲ್ಲಿ ಶ್ರೀಧರ್ ಗೌಡ ಹಾಗೂ ಕೃಷ್ಣೇಗೌಡರ ಅಭಿಮಾನಿಗಳು ತಮ್ಮ ನಾಯಕನ ಪರ ಪರಸ್ಪರ ಘೋಷಣೆ ಕೂಗಲಾರಂಭಿಸಿದರು. ಪೊಲೀಸರು ಧಾವಿಸಿ ವಿಡಿಯೋ ಚಿತ್ರೀಕರಿಸಿದ ನಂತರ ಕೂಗಾಟ ಸ್ವಲ್ಪ ತಣ್ಣಗಾಯಿತು.
ನಾ ಒಂದೇ ಕಡೆ ನಿಲ್ಲೋದು:
ನಮ್ಮ ತಂದೆ ಸಿದ್ದರಾಮಯ್ಯ ಅವರು ಎರಡು ಕಡೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನುವ ಕುರಿತು ಪುತ್ರ ಯತೀಂದ್ರ ಅವರ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸಿದ್ದರಾಮಯ್ಯ ಅವರು ಅದು ಆತನ ಹೇಳಿಕೆ ನನ್ನದಲ್ಲ ಎಂದರು.
ಕೋಲಾರದಲ್ಲಿ ಸ್ಪರ್ಧಿಸಿದರೆ ಸಿದ್ದರಾಮಯ್ಯ ಅವರಿಗೆ ಚುನಾವಣೆ ಕಷ್ಟವಾಗಲಿದೆ ಎನ್ನುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಗರಂ ಆದ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ನಮ್ಮ ಪಕ್ಷವಲ್ಲ, ಅದು ಮತದಾರರ ತೀರ್ಪು ಎಂದು ಗುಡುಗಿದರು.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ ಎನ್ನುವ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಆತನದು ಮುಳ್ಳಿಲ್ಲದ ನಾಲಿಗೆ, ಮೋದಿ ದುರಾಡಳಿತ ಪ್ರಶ್ನಿಸುವ ಹಕ್ಕು ನನಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
0 Comments