ರಾಮಸ್ವಾಮಿಗೆ ಐದು ವರ್ಷವಿಡೀ ನನ್ನಿಂದಲೇ ಲಾಭ; ಎ. ಮಂಜು ಆಕ್ಷೇಪ

ಅರಕಲಗೂಡು: ಕ್ಷೇತ್ರದ ಏಳಿಗೆಗೆ ಎಳ್ಳಷ್ಟು ಕೊಡುಗೆ ನೀಡದ ಶಾಸಕ ಎ.ಟಿ. ರಾಮಸ್ವಾಮಿ ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಮುಂದುವರಿಸಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳುತ್ತಿರುವ ಪ್ರವೃತ್ತಿ ತರವಲ್ಲ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೂಡ ನನ್ನ ಕನಸಿನ ಕೂಸು, ಈ ಯೋಜನೆಯ ರೂಪ ಬದಲಾಯಿಸಿ ಶಾಸಕರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಎ. ಮಂಜು ತೀವ್ರ ವಾಗ್ದಾಳಿ ನಡೆಸಿದರು.

ಶಾಸಕರಾಗಿ ರಾಮಸ್ವಾಮಿ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ತೋರಿಸಲಿ. ನಾನು ಸಚಿವನಾಗಿದ್ದ ವೇಳೆ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು ಅದನ್ನು ಮುಂದುವರೆಸಿಕೊAಡು ಹೋಗುತ್ತಿರುವ ಹಾಲಿ ಶಾಸಕರು ಅವುಗಳನ್ನು ತಾವೇ ಮಾಡಿಸಿದ್ದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ, ಇಂತಹ ಪ್ರವೃತ್ತಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಪಟ್ಟಣದಲ್ಲಿ ಜ. 22ರಂದು ಶಂಕುಸ್ಥಾಪನೆ ನೆರವೇರಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ತಾವು ಸಚಿವರಾಗಿದ್ದ ವೇಳೆ ಮಂಜೂರಾತಿ ದೊರಕಿಸಿದ್ದೆ. ಇದು ನನ್ನ ಕನಸಿನ ಕೂಸಾಗಿತ್ತು. ಕಾಮಗಾರಿ ಪ್ರಾರಂಭವಾಗಿ ಜನರಿಗೆ ಅದರ ಫಲ ದೊರೆಯುವುದು ಸಂತೋಷಕರ ಸಂಗತಿ ಆದರೆ, ಇದನ್ನು ಮಾಡಿಸಿದವರ ಕುರಿತು ಸೌಜನ್ಯಕ್ಕೂ ನೆನೆಯದಿರುವುದು ನೋವಿನ ಸಂಗತಿ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಎಷ್ಟನೇ ಇಸವಿಯಲ್ಲಿ ಪ್ರಾರಂಭವಾಯಿತು, ಪ್ರಸ್ತಾವನೆಯನ್ನು ಯಾವಾಗ ಸಲ್ಲಿಸಲಾಯಿತು. ಆಗ ಇದ್ದ ಶಾಸಕರು ಯಾರು ಎಂಬುದನ್ನು ದಾಖಲೆಗಳಲ್ಲಿ ತೆಗೆದು ನೋಡಿದರೆ ಸತ್ಯಾಂಶ ಏನೆಂಬುದು ತಿಳಿಯುತ್ತದೆ, ಕಾಮಗಾರಿಗಳ ಹೆಸರನ್ನು ಬದಲಿಸಿ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ಆರೋಪಿಸಿದರು. 

ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಮುರಾರ್ಜಿ, ಅಂಬೇಡ್ಕರ್ ವಸತಿ ಶಾಲೆಗಳನ್ನು ಮಂಜೂರು ಮಾಡಿಸಿದ್ದೆ. ಒಂದೇ ದಿನದಲ್ಲಿ ಕೋಟ್ಟಾಂತರ ರೂ ಕಟ್ಟಡ ಉದ್ಭವವಾಗುವುದಿಲ್ಲ ಎಂಬುದು ಜನರಿಗೂ ಗೊತ್ತು. ಚುನಾಯಿತರಾಗಿ ಬಂದ ಶಾಸಕರು ಕಾಮಗಾರಿಗಳನ್ನು ಮುಂದುವರೆಸಿಕೊಂಡು ಹೋಗುವುದು ಕಾನೂನು ನಿಯಮವಾಗಿದೆ. ಹಾಲಿ ಶಾಸಕರು ಯಾವುದನ್ನು ಮಂಜೂರು ಮಾಡಿಸಿ ತಂದಿದ್ದಾರೆ ಎಂಬ ಕುರಿತು ದಾಖಲೆಗಳನ್ನು ಜನರ ಮುಂದೆ ಇಡಲಿ ಎಂದು ಸವಾಲು ಹಾಕಿದರು. 

ಪಟ್ಟಣದಲ್ಲಿ ದುಸ್ಥಿಯಲ್ಲಿದ್ದ ಅಂಬೇಡ್ಕರ್ ಭವನದ ಬದಲಿಗೆ ಹೈಟೆಕ್ ಮಾದರಿಯ ಕಟ್ಟಡ ನಿರ್ಮಿಸಲು ಸರ್ಕಾರದಿಂದ 3.5 ಕೋಟಿ ರೂ ಹಣ ಮಂಜೂರು ಮಾಡಿಸಿದ್ದೆ. ಅದು ನಿರ್ಮಾಣವಾದರೆ ನನಗೆ ಹೆಸರು ಬರುತ್ತದೆ ಎಂದು ಸಮುದಾಯದ ಕೆಲವರನ್ನು ಎತ್ತಿಕಟ್ಟಿ ತಡೆ ಒಡ್ಡಿದರು. 5 ವರ್ಷ ಪೂರ್ಣಗೊಂಡರೂ ಕಟ್ಟಡ ನಿರ್ಮಾಣಕ್ಕೆ ಏಕೆ ಮುಂದಾಗಿಲ್ಲ, ಪಟ್ಟಣದಲ್ಲಿ ಕೈಗೊಂಡಿದ್ದ ಒಳಚರಂಡಿ ಕಾಮಗಾರಿ ಕುರಿತು ಅಪಪ್ರಚಾರ ನಡೆಸಿ ಸಾರ್ವ ಜನಿಕರಿಗೆ ಇದರ ಸೌಲಭ್ಯ ದೊರಕದಂತೆ ಮಾಡಲಾಯಿತು, ಈಗ ಸಾಲಗೇರಿ ರಸ್ತೆಯಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ. ನನ್ನ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿದ್ದ ಶಾಸಕರು ಈಗ ಮಾಡುತ್ತಿರುವುದು ಏನು ಎಂಬುದನ್ನು ಆತ್ಮಾವಲೋಕ ಮಾಡಿಕೊಳ್ಳಬೇಕು ಎಂದು ಛೇಡಿಸಿದರು.

Post a Comment

0 Comments