ಅರಕಲಗೂಡು: ಜನಸಮುದಾಯದ ಕಲ್ಯಾಣಕ್ಕಾಗಿ ಶಿಕ್ಷಣ, ಆರೋಗ್ಯ, ಧಾರ್ಮಿಕ ಕ್ಷೇತ್ರ ಸೇರಿದಂತೆ ಹಲವಾರು ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಸೇವಾ ಕಾರ್ಯಗಳ ಭಾಗವಾಗಿ ಇದೀಗ ಪಟ್ಟಣದಲ್ಲಿ ಫೆ.೪, ೫, ೬ರಂದು ಹಮ್ಮಿಕೊಂಡಿರುವ ಪವಿತ್ರ ಗುರು ತೋರಿದದಾರಿ ತಿಂಗಳ ಮಾಮನ ತೇರು ಶತಕ ಪೂರ್ಣಿಮಾ ಕಾರ್ಯಕ್ರಮಕ್ಕೆ ಭರದ ಸಿದ್ದತೆಗಳು ನಡೆದಿದ್ದು ಅನಕೃ ತವರು ಧಾರ್ಮಿಕ ಕಾರ್ಯಕ್ರಮಗಳ ತೋರಣವಾಗಿ ಸಿಂಗಾರಗೊಂಡಿದೆ.
ಪಟ್ಟಣದ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳವರು. ಕಾರ್ಯಕ್ರಮಕ್ಕೆ ಪಟ್ಟಣದ ಕ್ರೀಡಾಂಗಣದಲ್ಲಿ ವರ್ಣರಂಜಿತವಾದ ಭವ್ಯ ವೇದಿಕೆ ತಲೆಎತ್ತಿದೆ.
ಆದಿಚುಂಚನಗಿರಿ ಹಿಂದಿನ ಮಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಸಂಸ್ಮರಣೆ, ಇಂದಿನ ಪೀಠಾಧ್ಯಕ್ಷ ಡಾ ನಿರ್ಮಲಾನಂದನಾಥ ಸ್ವಾಮೀಜಿಗಳ ಪಟ್ಟಾಭೀಷೇಕದ ದಶಮಾನೋತ್ಸವ, ರಜತ ತುಲಾಭಾರ, ಯುವಜನೋತ್ಸವ, ಬಿಜಿಎಸ್ ಬೆಳದಿಂಗಳೋತ್ಸವ, ಬಿಜಿಎಸ್ ಶಾಲಾ ಕಾಲೇಜುಗಳ ದಶಮಾನೋತ್ಸವ, ವಾರ್ಷಿಕೋತ್ಸವ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿದ್ದು ಸಂಭ್ರಮ ಮೇಳೈಸಿದೆ.
ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಬ್ಯಾನರ್, ಪ್ಲೆಕ್ಸ್ ಗಳನ್ನು ಅಳವಡಿಸಿದ್ದು ಎಲ್ಲೆಡೆ ಸಡಗರ ತುಂಬಿದೆ.
ಕಾರ್ಯಕ್ರಮದ ಪೂರ್ವ ಸಿದ್ದತೆ ಕುರಿತು ಕಬ್ಬಳ್ಳಿ ಶಿವಪುತ್ರ ಸ್ವಾಮೀಜಿ ವಿವರಿಸಿ, ಸುಮಾರು ೨೫ ಸಾವಿರ ಜನರಿಗೆ ಅಸನ ವ್ಯವಸ್ಥೆ ಒದಗಿಸುವಂತೆ ವಿಶಾಲ ವೇದಿಕೆ ಹಾಗೂ ಕಾರ್ಯಕ್ರಮ ನಡೆಯುವ ವೇದಿಕೆ ನಿರ್ಮಿಸಲಾಗಿದ್ದು ಜನರು ಯಾವುದೇ ಅಡೆ, ತಡೆ ಇಲ್ಲದೆ ಕಾರ್ಯಕ್ರಮಗಳನ್ನು ವೀಕ್ಷಿಸ ಬಹುದಾಗಿದೆ. ವೇದಿಕೆಯ ಬಲ ಭಾಗದಲ್ಲಿ , ಊಟ ತಿಂಡಿ ತಯಾರಿಕೆಗಾಗಿ ಅಡಿಗೆ ಕೊಠಡಿ ನಿರ್ಮಿಸಿದ್ದು ೧೦೦ ಮಂದಿ ಬಾಣಸಿಗರು ವಿವಿಧ ರೀತಿಯ ಖಾದ್ಯ ತಯಾರಿಸುವರು. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗಿದೆ. ಊಟದ ವ್ಯವಸ್ಥೆಗಾಗಿ ಭಕ್ತರು ಅಕ್ಕಿ, ಬೇಳೆ, ಅಡಿಗೆಎಣ್ಣೆ, ಮುಂತಾದ ಎಲ್ಲ ಆಹಾರ ಪದಾರ್ಥಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಎಲ್ಲರಿಗೂ ಶುದ್ದ ಕುಡಿಯುವ ನೀರು, ಕೈತೊಳೆಯಲು ಪ್ರತ್ಯೇಕ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಇದ್ದು ಯಾವುದೇ ಕೊರತೆಯಾಗದಂತೆ ಕಾರ್ಯಕ್ರಮ ರೂಪಿಸಿರುವುದಾಗಿ ಹೇಳಿದರು.
ಶನಿವಾರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪುರ ಪ್ರವೇಶ ಮಾಡಲಿದ್ದು ಗ್ರಾಮದೇವತೆ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಬೆಳಿಗ್ಗೆ ರಾಮನಾಥಪುರ ರಸ್ತೆ ಚಿಲುಮೆ ಮಠದ ಆವರಣದಿಂದ ಸ್ವಾಮೀಜಿಗಳ ಮೆರವಣಿಗೆ ಪ್ರಾರಂಭವಾಗಲಿದೆ. ಗುರು ವಂದನಾ ಕಾರ್ಯಕ್ರಮದ ನಂತರ ವಿವಿಧ ವ್ಮಠಾಧೀಶರ ಸಮ್ಮುಖದಲ್ಲಿ ೧೦೦ ದೀಪಬೆಳಗಿಸುವ ಮೂಲಕ ಬೆಳದಿಂಗಳೋತ್ಸವ ಜರುಗಲಿದೆ. ಸೋಮವಾರ ಸಾವಿರಾರು ಯುವಜನರ ಸಮ್ಮುಖದಲ್ಲಿ ಯುವ ಜನಸಂಭ್ರಮ ಕಾರ್ಯಕ್ರಮ ನಡೆಯಲಿದ್ದು ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸುವರು. ಕಾರ್ಯಕ್ರಮಕ್ಕೆ ಮುನ್ನ ಅಲ್ಲಿನ ಕಲ್ಯಾಣ ಮಂಟಪದಲ್ಲಿ ಭಕ್ತರಿಗೆ ಬೆಳಗಿನ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಜನರ ವಾಹನಗಳ ನಿಲುಗಡೆಗೆ ಹಳೆ ಬಸ್ ನಿಲ್ದಾಣ, ಕಾಲೇಜು ಮೈದಾನ ಸೇರಿದಂತೆ ವಿವಿದೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಬಿಜಿಎಸ್ ಕಾಲೇಜು ಪ್ರಾಂಶುಪಾಲ ಮಹೇಶ್ ಹೊಡೆನೂರು ಮಾತನಾಡಿ, ಇದೊಂದು ಐತಿಹಾಸಿ ಕಾರ್ಯಕ್ರಮವಾಗಿದ್ದು ಭಕ್ತರ ಸಹಕಾರದಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ, ತಾತ್ಕಾಲಿಕವಾಗಿ ಶೌಚಗೃಹ ಹಾಗೂ ಬರುವ ಭಕ್ತರಿಗೆ ಯಾವುದೇ ಕೊರತೆ ಉಂಟಾಗದಂತೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
0 Comments