ಅಂಗವಿಕಲರು ಶಿಕ್ಷಣ ಗಳಿಸಿದರಷ್ಟೆ ಉನ್ನತಿ: ಗ್ರಾಪಂ ಅಧ್ಯಕ್ಷ ವಕೀಲ ಪ್ರಶಾಂತ್

ಅರಕಲಗೂಡು: ಅಂಗವಿಕಲ ಮಕ್ಕಳಿಗೆ ತಮ್ಮ ಪಾಲಕರು ವಿದ್ಯಾಭ್ಯಾಸ ಕೊಡಿಸುವ ಮುಖೇನ ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಬಸವಾಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಸಿ. ಪ್ರಶಾಂತ್ ತಿಳಿಸಿದರು.

ತಾಲೂಕಿನ ಬಸವಾಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಸತಿ ರಹಿತರ ಹಾಗೂ ಅಂಗವಿಕಲರ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳ ಮೂಲಕ ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಅಂಗವಿಕಲರಿಗೆ ಅರಿವಿನ ಕೊರತೆ ಕಾರಣ ಸೌಲಭ್ಯಗಳು ಧಕ್ಕುತ್ತಿಲ್ಲ. ಹೀಗಾಗಿ ಪ್ರತಿಯೊಬ್ಬ ಅಂಗವಿಕಲ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸುಶಿಕ್ಷಿತರನ್ನಾಗಿಸಬೇಕು ಎಂದರು.

ಸರ್ಕಾರ ಪಂಚಾಯಿತಿಗೆ ಹೆಚ್ಚುವರಿಯಾಗಿ 24 ಮನೆಗಳನ್ನು ನೀಡಿದೆ. ವಸತಿ ರಹಿತರು ಅರ್ಜಿ ಸಲ್ಲಿಸಿದರೆ ಮುಂದಿನ ಬಾರಿ ಮನೆಗಳನ್ನು ನೀಡಲು ಅನುಕೂಲವಾಗಲಿದೆ ಎಂದು ಹೇಳಿದರು.

ಅಂಗವಿಕಲ ತಾಲೂಕು ನೋಡೆಲ್ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಅಂಗವಿಕಲರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು. ಕಿವುಡ, ಮೂಕ, ಬುದ್ಧಿಮಾಂದ್ಯ ಮಕ್ಕಳು ವಿದ್ಯಾಭ್ಯಾಸ ಕೊಡಿಸಬೇಕು. ಕಣ್ಣಿನ ತೊಂದರೆ ಇರುವ ಅಂಗವಿಕಲರಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಮದುವೆಯಾದ ಅಂಧತ್ವ ಮಹಿಳೆಯ ಎರಡು ಮಕ್ಕಳಿಗೆ ಐದು ವರ್ಷಗಳ ಕಾಲ ಪ್ರತಿ ತಿಂಗಳು ಎರಡು ಸಾವಿರ ಹಣ ನೀಡಲಾಗುವುದು.

 ಅರಕಲಗೂಡಿನ ವಸತಿಯುತ ಮಧುಶ್ರೀ ವೃದ್ದಾಶ್ರಮಕ್ಕೆ ಹಿರಿಯ ನಾಗರಿಕರನ್ನು ಕರೆತರಬಹುದು. ಶೇ. ಐದರ ಅನುದಾನದಲ್ಲಿ ಅಂಗವಿಕಲರಿಗೆ ಸಮರ್ಪಕ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ರಾಣಿ, ಪಿಡಿಒ ಮಂಜುನಾಥ್, ನೋಡೆಲ್ ಅಧಿಕಾರಿ ಧಮೇಂದ್ರ ಪ್ರಸಾದ್, ಶಿವಶಂಕರ್, ಪದ್ಮರಾಜ್, ಗ್ರಾಪಂ ಸದಸ್ಯರು ಇದ್ದರು.

Post a Comment

0 Comments