21ರ ಪ್ರಜಾಧ್ವನಿ ಯಾತ್ರೆಗೆ ಉತ್ತಮ ಜನ ಬೆಂಬಲವಿದೆ ಎಂದ ಕಾಂಗ್ರೆಸ್ ಮುಖಂಡರು

ಅರಕಲಗೂಡು: ಹಾಸನದಲ್ಲಿ ಜ 21ರಂದು ಕಾಂಗ್ರೆಸ್  ಪಕ್ಷದ ಪ್ರಜಾಧ್ವನಿ  ಯಾತ್ರೆ ನಡೆಯುತ್ತಿದ್ದು ಜನರಿಂದ  ಉತ್ತಮ ಬೆಂಬಲ ದೊರೆಯುತ್ತಿದೆ ಎಂದು  ರಾಜ್ಯ ಸಭೆಯ ಮಾಜಿ ಸದಸ್ಯ ಎಚ್. ಕೆ. ಜವರೇಗೌಡ ತಿಳಿಸಿದರು. 

ಪ್ರಜಾಧ್ವನಿ  ಸಮಾವೇಶದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬುಧವಾರ ನಡೆದ ಮುಖಂಡರ ಪೂರ್ವಭಾವಿ ಸಭೆಯ ಬಳಿಕ   ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನಿಂದ ಸುಮಾರು 20 ಸಾವಿರ ಜನರು ಸಮಾವೇಶಕ್ಕೆ  ಬರಲಿದ್ದು  ಅಗತ್ಯ ಸಿದ್ದತೆಯನ್ನು ಎಲ್ಲ ಮುಖಂಡರೂ ಒಗ್ಗೂಡಿ ನಡೆಸಲು ತೀರ್ಮಾನಿಸಲಾಯಿತು ಎಂದರು.  

ರಾಜ್ಯದಾದ್ಯಂತ ನಡೆಯುತ್ತಿರುವ ಪ್ರಜಾಧ್ವನಿ  ಸಮಾವೇಶಕ್ಕೆ ಜನಸಾಗರ ಸೇರುತ್ತಿದೆ. ಜಿಲ್ಲೆಯಲ್ಲೂ  ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು ಶನಿವಾರ ನಡೆಯುವ  ಸಮಾವೇಶದಲ್ಲಿ ಸುಮಾರು ಒಂದೂವರೆ ಲಕ್ಷ ಜನ  ಸೇರುವ ನಿರೀಕ್ಷೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮುಖಂಡರು ಸಭೆಯಲ್ಲಿ  ಭಾಗವಹಿಸಲಿದ್ದಾರೆ  ಎಂದು ಕಾರ್ಯಕ್ರಮದ ಕುರಿತು ವಿವರಿಸಿದರು.

ಆಡಳಿತಾರೂಢ ಬಿಜೆಪಿಯ  ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ,  ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರ ಕೆಲಸಕಾರ್ಯಗಳು ನಡೆಯತ್ತಿಲ್ಲ, ಪ್ರಭಾವಿಗಳ ಮಾತಿಗೆ ಮಾತ್ರ ಮನ್ನಣೆ ದೊರೆಯುತ್ತಿದೆ.  ರೋಸಿ  ಹೋಗಿರುವ ಜನತೆ ಕಾಂಗ್ರೆಸ್ ಪಕ್ಷದತ್ತ ಮುಖಮಾಡಿದ್ದಾರೆ. 1972 ರಲ್ಲಿ  ಡಿ. ದೇವರಾಜ ಅರಸು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವೇಳೆ ಪ್ರಚಂಡ ಜನಬೆಂಬಲ ವ್ಯಕ್ತವಾಗಿತ್ತು. 1978 ರಲ್ಲಿ  ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗಲೂ  ಆಂದ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಪಕ್ಷ ಪ್ರಚಂಡ ಜಯಭೇರಿ  ಭಾರಿಸಿತ್ತು ಅಂತಹ ವಾತಾವರಣ ಮತ್ತೆ  ರಾಜ್ಯದಲ್ಲಿ ಮರುಕಳಿಸುವ  ಎಲ್ಲ ಸೂಚನೆ ಇದೆ  ಎಂದು ವಿಶ್ವಾಸ ವ್ಯಕ್ತ ಪಡಿಸಿದರು. 

ಜನರು ಪಕ್ಷದ ಮೇಲೆ ವಿಶ್ವಾಸವಿಟ್ಟು ಮೇರೆ ಮೀರಿದ  ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ಮುಖಂಡರು ಜನರ ಮುಂದೆ ತಗ್ಗಿ, ಬಗ್ಗಿ ನಡೆಯುವ ಮೂಲಕ  ಅವರ ಭಾವನೆಗಳನ್ನು ಗೌರವಿಸಬೇಕು ಹಾಗೂ ಜನ ಸಾಮಾನ್ಯರ ನೋವುಗಳಿಗೆ ಸ್ಪಂದಿಸಿ ಕೆಲಸ ಮಾಡುವತ್ತ ಗಮನ ಹರಿಸಬೇಕು. ಹಾಸನದ ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕಾರ ನೀಡಬೇಕು  ಎಂದರು.

 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಎಸ್.ಎಸ್. ಪ್ರಸನ್ನ ಕುಮಾರ್, ಮುಖಂಡರಾದ  ಎಂ.ಟಿ.ಕೃಷ್ಣೇಗೌಡ, ಮಕ್ಕಳ ತಜ್ಞ ಡಾ. ದಿನೇಶ್ ಬೈರೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ  ಎಚ್.ಪಿ.ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಮಂಜುನಾಥ್  ಇದ್ದರು.

Post a Comment

0 Comments