ಹೊನ್ನೇನಹಳ್ಳಿ; 25 ಕೋಟಿ ರೂ ವೆಚ್ಚದ ವಸತಿ ಶಾಲೆ ಉದ್ಘಾಟಿಸಿ ಸಚಿವ ಕೆ. ಗೋಪಾಲಯ್ಯ

ಅರಕಲಗೂಡು: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ತಾಲೂಕಿನ ಕೇರಳಾಪುರ ಗ್ರಾಪಂ ವ್ಯಾಪ್ತಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಸೋಮವಾರ 25 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಇಂದಿರಾ ಗಾಂಧಿ ವಸತಿ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಶಿಕ್ಷಣ ಕ್ಷೇತ್ರದಕ್ಕೆ ಅಧಿಕ ಅನುದಾನ ಒದಗಿಸಿದ್ದಾರೆ. ಈ ಕಟ್ಟಡವನ್ನು ಒಂದೂವರೆ ವರ್ಷದಲ್ಲಿ ನಿರ್ಮಿಸಿದ್ದು, 250 ವಿದ್ಯಾರ್ಥಿಗಳು ವ್ಯಾಸಂಗ ಮಾಡಲಿದ್ದಾರೆ. ಇದೇ ರೀತಿಯಾಗಿ 4 ಕಟ್ಟಡಗಳು ಈಗಾಗಲೇ ಉದ್ಘಾಟನೆಯಾಗಿದ್ದು, ಮುಂದಿನ ದಿನದಲ್ಲಿ ಮತ್ತೊಂದು ವಸತಿ ಶಾಲಾ ಕಟ್ಟಡ ಉದ್ಘಾಟನೆಯಾಗಲಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸಬೇಕು ಎಂದರು.

ಆನೆ ತುಳಿತಕ್ಕೆ ಒಳಗಾದ ಕುಟುಂನಕ್ಕೆ 15 ಲಕ್ಷ ರೂ ಪರಿಹಾರ ನೀಡಲಾಗುವುದು. ಮಾನವ ಹಾನಿಗೆ ಏಳುವರೇ ಲಕ್ಷದಿಂದ 15 ಲಕ್ಷ ರೂ ಹಾಗೂ ಶಾಶ್ವತ ಅಂಗವಿಕಲತೆಗೆ 5 ರಿಂದ 10 ಲಕ್ಷ ರೂ, ಭಾಗಶಃ ಹಾನಿಗೆ ಎರಡೂವರೆ ಲಕ್ಷದಿಂದ 5 ಲಕ್ಷ, ಗಾಯವಾದರೆ 30ರಿಂದ 60 ಸಾವಿರ ರೂ ಮತ್ತು ಬೆಳೆ ಹಾನಿಯಾದರೆ ಈಗಿನ ಪರಿಹಾರಕ್ಕಿಂತ ದುಪ್ಪಟ್ಟು ಏರಿಕೆ ಮಾಡಲಾಗಿದೆ. ಮಡಿಕೇರಿಯಲ್ಲಿ ಟ್ರಸ್ಟ್ ಮಾಡಿ ಆನೆಯಿಂದ ಹಾನಿಯಾದರೆ ಕೂಡಲೇ ಪರಿಹಾರ ನೀಡಬೇಕು. ಜತೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಾಸನ, ಚಿಕ್ಕಮಗಳೂರಿಗೆ 2 ಕೋಟಿ ರೂ ಹಣವನ್ನು ಟ್ರಸ್ಟ್ ನಲ್ಲಿ ಇರಿಸಿ ಸಮಸ್ಯೆಯಾದರೆ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಶಾಸಕ ಎ. ಟಿ. ರಾಮಸ್ವಾಮಿ ಮಾತನಾಡಿ, ಮಕ್ಕಳು ಶಿಕ್ಷಣ ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಸರ್ಕಾರ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಪಂ ಸಿಇಒ ಕಾಂತರಾಜ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ದೇವರಾಜ್, ಉಪನಿರ್ದೇಶಕ ಮಂಜುನಾಥ್, ಕೇರಳಾಪುರ ಗ್ರಾಪಂ ಅಧ್ಯಕ್ಷ ಮಂಜುನಾಥ್, ಕಾಳೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಪಾರ್ವತಮ್ಮ ಯೋಗೇಶ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ದೇಸಾಯಿ, ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ಬಿಇಒ ದೇವರಾಜ್, ತಾಲೂಕು ಕೃಷಿ ಅಧಿಕಾರಿ ರಮೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮನುಕುಮಾರ್, ವಸತಿ ಶಾಲೆ ಪ್ರಾಂಶುಪಾಲ ಎಂ.ಎಸ್. ವಿಶ್ವನಾಥ್ ಇತರರು ಉಪಸ್ಥಿತರಿದ್ದರು.

Post a Comment

0 Comments