ಅರಕಲಗೂಡು: ಕೆಲ ವೈದ್ಯರ ನಿರ್ಲಕ್ಷ್ಯದಿಂದಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರೆ. ಮೊನ್ನೆ ಮೊನ್ನೆಯಷ್ಟೆ ತುಮಕೂರಿನಲ್ಲಿ ಇಂಥ ಮನಕಲಕುವ ದುರ್ಘಟನೆ ಆಗೇ ಹೋಯಿತು.
ಆದರೆ, ಜೀವ ಸಂಕುಲವನ್ನರಿತು ತಾಲೂಕಿನ ಮುಂಡಗೋಡು ಗ್ರಾಮದಲ್ಲಿ ಪಶು ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಹಸು ಕರುವಿನ ಜೀವ ಕಾಪಾಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಗ್ರಾಮದ ಮೋಹನ್ ಎಂಬುವರ ಹಸು ಪ್ರಸವದ ವೇಳೆ ಗರ್ಭಕೋಶ ತೆರೆಯದೆ ಚಿಂತಾಜನ ಸ್ಥಿತಿಯಲ್ಲಿ ನರಳಾಡುತ್ತಿತ್ತು.
ಗರ್ಭ ಧರಿಸಿದ ಹಸು ಒಂಬತ್ತು ತಿಂಗಳು ಒಂಬತ್ತು ದಿನಕ್ಕೆ ಕರುವಿಗೆ ಜನ್ಮ ನೀಡುವುದು ಸಾಮಾನ್ಯ. ಮೋಹನ್ ಅವರ ಹಸುವಿಗೆ ಒಂಬತ್ತು ತಿಂಗಳು ಹದಿನೈದು ದಿನ ಕಳೆದರೂ ಕರುವಿಗೆ ಜನ್ಮ ನೀಡಿರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಗರ್ಭಕೋಶ ತೆರೆದುಕೊಳ್ಳದೆ ಶುಕ್ತವಾರ ಕರುವಿಗೆ ಜನ್ಮ ನೀಡಲು ಸಾಧ್ಯವಾಗದೆ ನರಳಾಡುತ್ತಿತ್ತು. ಒಂದು ದಿನ ಮುಂಚಿತವಾಗಿ ಮೇವು ತಿನ್ನವುದನ್ನು ನಿಲ್ಲಿಸಿತ್ತು.
ಶುಕ್ರವಾರ ಸಂಜೆ ಅಬ್ಬೂರು ಮಾಚಗೌಡನಹಳ್ಳಿ ಪಶು ಆಸ್ಪತ್ರೆ ವೈದ್ಯರಾದ ಡಾ. ಚೇತನ್ ಅವರು ಹಸುವಿಗೆ ಸೂಕ್ತ ಔಷಧಿ ನೀಡಿ ಶಸ್ತ್ರಚಿಕಿತ್ಸೆ ನಡೆಸಿ ಕರು ಹೊರತೆಗೆದು ತಾಯಿ ಹಸು ಮತ್ತು ಕರುವಿನ ಪ್ರಾಣ ಉಳಿಸುವಲ್ಲಿ ಸಫಲರಾದರು.
ಹಸು ಕರುವಿಗೆ ಹಾಲುಣಿಸುತ್ತಿದ್ದು ತಾಯಿ ಹಸು ಮತ್ತು ಕರು ಆರೋಗ್ಯಕರವಾಗಿವೆ. ಕಷ್ಟದ ಸಮಯದಲ್ಲಿ ವೈದ್ಯರು ಧಾವಿಸಿ ಹಸು ಕರುವಿನ ಜೀವ ಉಳೊಸಿದ್ದಾರೆ ಎಂದು ರೈತ ಮೋಹನ್ ಹರ್ಷ ವ್ಯಕ್ತಪಡಿಸಿದರು.
ಡಾ. ಚಿರಂಜಿವಿ, ಆಸ್ಪತ್ರೆ ಸಿಬ್ಬಂದಿ ಲೋಕೇಶ್ ಮೂರ್ತಿ ಶಸ್ತ್ರಚಿಕಿತ್ಸೆಗೆ ಸಹಕರಿಸಿದರು.
0 Comments