ಅರಕಲಗೂಡು: ಸಂವಿಧಾನ ಸಂರಕ್ಷಣೆಗಾಗಿ ಬಹುಜನ ಸಮಾಜ ಪಾರ್ಟಿ ನ. 4ರಂದು ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಜೈಭೀಮ್ ಜನಜಾಗೃತಿ ಜಾಥಾ ಹಿನ್ನಲೆಯಲ್ಲಿ ಪ್ರತಿ ಹಳ್ಳಿಗೆ ಹೋಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಅತ್ನಿ ತಿಳಿಸಿದರು.
ದೇಶದಲ್ಲಿ ಇದುವರೆಗೆ ಆಡಳಿತ ನಡೆಸಿ ರಾಜಕೀಯ ಪಕ್ಷಗಳು ಸಂವಿಧಾನಕ್ಕೆ ವಿರುದ್ದವಾದ ಕಾನೂನುಗಳನ್ನು ರೂಪಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದು, ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ದುರ್ಬಲಗೊಳಿಸುತ್ತಿವೆ. ಮತ್ತೊಂಡೆ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲಾಗುತ್ತಿದೆ. ಇದರಿಂದ ದೀನ ದಲಿತರು, ದುರ್ಬಲ ವರ್ಗದ ಜನರ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿರು.
ರಾಷ್ಟ್ರದ ಬಹುಬಸಂಖ್ಯಾತ ಸಮುದಾಯ ಸದ್ಯದ ಸ್ಥಿತಿಯಲ್ಲಿ ಅಪಾಯದಲ್ಲಿದೆ. ಯುವಕರಿಗೆ ಉದ್ಯೋಗ ಇಲ್ಲದಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಬದುಕು ಮುರಾಬಟ್ಟೆಯಾಗಿದೆ, ಖಾಸಗೀಕರಣದ ಹೆಸರಿನಲ್ಲಿ ಜನಸಾಮಾನ್ಯರ ಜೀವನದ ಜತೆ ಚೆಲ್ಲಾಟವಾಡಲಾಗುತ್ತಿದೆ ಎಂದು ದೂರಿದರು.
ಸಮಾಜದಲ್ಲಿ ಸಮಾನತೆ ಕಾಣುತ್ತಿಲ್ಲ. ಅಸ್ಪೃಶ್ಯತೆ ತೊಲಗುತ್ತಿಲ್ಲ. ಸಂವಿಧಾನದ ಆಶಯಗಳನ್ನು ಕಾಪಾಡಲಾಗುತ್ತಿಲ್ಲ. ಸಂವಿಧಾನ ಸಂರಕ್ಷಣೆ ಮಾಡಿ ಶೋಷಿತರ ಬದುಕು ಸುಧಾರಣೆ ಕಾಣಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಹಳ್ಳಿಗಳಲ್ಲಿ ಜನರಲ್ಲಿ ಅರಿವು ಮೂಡಿಸಲಾಗಿದೆ. ಜಾಥಾವನ್ನು ಗೊರೂರಿನಲ್ಲಿ ಸ್ವಾಗತಿಸಲಾಗುವುದು. ಅರಕಲಗೂಡು ಪಟ್ಟಣ ಮೂಲಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸಂಚರಿಸಲಿದೆ ಎಂದರು.
ಬಿ.ಎಸ್.ಪಿ. ನಗರ ಘಟಕದ ಅಧ್ಯಕ್ಷ ಶಿವಣ್ಣ, ಈರರಾಜು, ಜಿಲ್ಲಾ ಕಾರ್ಯದರ್ಶಿ ಮನುಕುಮಾರ್, ತಾಲೂಕು ಉಪಾಧ್ಯಕ್ಷ ಶಾಹಿಲ್ ಪಾಷಾ, ಸಮೀರ್ ಅಹಮದ್, ಬಿ.ವಿ.ಎಫ್. ಅಜ್ಜೂರು ಕಿರಣ್ ಗೋಷ್ಠಿಯಲ್ಲಿದ್ದರು.
0 Comments