ಅರಕಲಗೂಡು: ರಾಜಕೀಯವಾಗಿ ಉಪ್ಪಾರ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗದೆ ಹತಾಶ ಸ್ಥಿತಿ ಕಾಡುತ್ತಿದೆ. ಸಮಾಜದ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ರಾಜ್ಯ ಉಪ್ಪಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಕೆ ಗಿರೀಶ್ ಉಪ್ಪಾರ್ ತಿಳಿಸಿದರು.
ರಾಜ್ಯದಲ್ಲಿ ಉಪ್ಪಾರ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ತೀರ ಹಿಂದುಳಿದ ಸಮುದಾಯವಾಗಿದೆ. ಜಿಲ್ಲೆಯಲ್ಲಿ 80 ಸಾವಿರ ಜನಸಂಖ್ಯೆ ಇದ್ದರೂ ರಾಜಕೀಯವಾಗಿ ಈ ಸಮುದಾಯಕ್ಕೆ ಯಾವುದೇ ಸ್ಥಾನಮಾನ ದೊರೆಯದಿರುವುದು ವಿಷಾದಕರ ಸಂಗತಿ, ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೆ ಸಮುದಾಯದವರನ್ನು ಒಗ್ಗೂಡಿಸಿ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಸಮಾವೇಶ ನಡೆಸಿ ಸಮುದಾಯದ ಶಕ್ತಿ ಪ್ರದರ್ಶನ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾವು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಳಿಕ ರಾಜ್ಯದಾದ್ಯಂತ ಪ್ರವಾಸ ನಡೆಸಿ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿದ್ದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರೂ ಅಗತ್ಯವಾದ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ 46 ಸಮುದಾಯ ಭವನಗಳ ನಿರ್ಮಾಣಕ್ಕೆ ಹಣ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಪಟ್ಟಣದ ಸಮುದಾಯ ಭವನದ ಕಾಮಗಾರಿ ದಾಖಲೆಗಳು ಸರಿ ಇಲ್ಲ ಎಂಬ ಕಾರಣದಿಂದ ಅರ್ಧಕ್ಕೆ ನಿಂತಿರುವ ವಿಷಯ ಗಮನಕ್ಕೆ ಬಂದಿದ್ದು ಇದನ್ನು ಸರಿಪಡಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ಅತಿವೃಷ್ಟಿಯಿಂದ ಸಮುದಾಯದವರ ಹಲವಾರು ಮನೆಗಳಿಗೆ ಹಾನಿಯಾಗಿದೆ. ತಾಲೂಕಿನಲ್ಲಿ ಸುಮಾರು 100 ಮನೆಗಳಿಗೆ ಹಾನಿಯಾಗಿದೆ, ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಸಂಕಷ್ಟಕ್ಕೆ ಒಳಗಾದವರಿಗೆ ಅಗತ್ಯವಾದ ನೆರವು ದೊರಕಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮುರುಘಾ ಮಠದ ಪ್ರಕರಣದಲ್ಲಿ ಉಪ್ಪಾರ ಸಮುದಾಯದ ಬಾಲಕಿಯೊಬ್ಬಳು ಸಂತ್ರಸ್ಥೆ ಯಾಗಿದ್ದು ಆಕೆಯ ಕುಟುಂಬವನ್ನು ಭೇಟಿ ಮಾಡಿ ಆರ್ಥಿಕ ನೆರವು ನೀಡಿ ಧೈರ್ಯ ತುಂಬಲಾಗಿದೆ. ಘಟನೆ ಖಂಡಿಸಿ ಸಮಾಜದವರು ಪ್ರತಿಭಟನೆ ಹೋರಾಟವನ್ನೂ ನಡೆಸಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿದ್ದು ನ್ಯಾಯ ದೊರಕುವ ವಿಶ್ವಾಸವಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಭಾನುಪ್ರಕಾಶ್, ಕಾರ್ಯದರ್ಶಿ ಸೂರ್ಯ, ಉಪ್ಪಾರ ಸಮಾಜದ ಮುಖಂಡರಾದ ನಾಗರಾಜ್, ಲಕ್ಷ್ಮೀಶ್ ಇದ್ದರು
0 Comments