ಅರಕಲಗೂಡು: ಕೊಡಗಿನಲ್ಲಿ ಮಳೆ ಹಾನಿ ವೀಕ್ಷಣೆಗೆ ತೆರಳಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರು ಮೇಲೆ ಮೊಟ್ಟೆಯೆಸೆದು ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರ ವರ್ತನೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಅನಕೃ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೆಲಕಾಲ ರಸ್ತೆ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ಮಾತನಾಡಿ, ಮಳೆ ಹಾನಿ ವೀಕ್ಷಣೆಗೆ ಕೊಡುಗು ಜಿಲ್ಲೆಗೆ ತೆರಳಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸಿ ಬಿಜೆಪಿ ಕಾರ್ಯಕರ್ತರು ದುರ್ವತನೆ ಮೆರೆದಿದ್ದಾರೆ. ಮಳೆ ಆರ್ಭಟಕ್ಕೆ ಕೊಡಗು ಜಿಲ್ಲೆ ತತ್ತರಿಸಿ ಹೋಗಿದೆ. ಸ್ವತಃ ಮುಖ್ಯ ಮಂತ್ರಿಗಳೆ ಜಿಲ್ಗೆಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ದೊರಕಿಸುವ ಕಾರ್ಯ ನಡೆಸಬೇಕಿತ್ತು. ಜನರ ಸಂಕಷ್ಟ ಅರಿತು ಸರ್ಕಾರವನ್ನು ಎಚ್ಚರಿಸಲು ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕರ ಮೇಲೆ ಇಂತಹ ಕಿಡಿಗೇಡಿ ಕೃತ್ಯ ನಡೆಸಿರುವುದು ಜಿಲ್ಲೆಗೆ ಅಪಮಾನ ಮಾಡಿರುವುದಲ್ಲದೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ದೊರಕಲು ತಡೆಯೊಡ್ಡಿದಂತಾಗಿದೆ. ಯಾವುದೇ ನಾಯಕರ ಮೇಲೆ ನಡೆಯುವ ಇಂತಹ ಹೀನ ಕೃತ್ಯಗಳು ಖಂಡನಾರ್ಹ. ಸರ್ಕಾರ ಕಿಡಿಗೇಡಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಇಂತಹ ಕೃತ್ಯ ಎಸಗಲಾಗಿದೆ. ಪ್ರತಿಭಟನೆ ಕುರಿತು ಮೊದಲೆ ಅರಿವಿದ್ದರೂ ವಿರೋಧ ಪಕ್ಷದ ನಾಯಕರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲರಾಗಿರುವುದು ಪೊಲೀಸರ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ. ರಾಜ್ಯದಲ್ಲಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಬಿಗಿ ಕ್ರಮ ಕೈಗೊಂಡು ಶಾಂತಿ ಕಾಪಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
0 Comments