ಅರಕಲಗೂಡು: ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗೂಂಡಾಗಿರಿ ವರ್ತನೆ ತೋರಿರುವುದು ತರವಲ್ಲ ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್‌ಗೌಡ ಖಂಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಹಾನಿ ಪ್ರದೇಶಕ್ಕೆ ವೀಕ್ಷಣೆಗೆಂದು ತೆರಳುತ್ತಿದ್ದ ಸಿದ್ದರಾಮಯ್ಯ ಅವರ ಕಾರು ಅಡ್ಡಗಟ್ಟಿ ಮೊಟ್ಟೆ ಎಸೆದು ದಿಕ್ಕಾರ ಕೂಗಿ ಕೊಡಗಿನ ಬಿಜೆಪಿ ಕಾರ್ಯಕರ್ತರು ಕಾನೂನಿಗೆ ವಿರುದ್ದವಾಗಿ ಅಮಾನೀಯವಾಗಿ ನಡೆದುಕೊಂಡಿರುವುದು ಉತ್ತಮ ನಡವಳಿಕೆಯಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಅಭಿವ್ಯಕ್ತಿ ಸ್ವಾತಂತ್ರö್ಯಕ್ಕೆ ವಿರುದ್ದವಾಗಿ ಬಿಜೆಪಿ ಸಂವಿಧಾನ ವಿರೋಧಿಯಾಗಿ ದಾಂದಲೆ ನಡೆಸಲು ಮುಂದಾಗಿದ್ದು ರಾಜ್ಯದ ಜನರಲ್ಲಿ ಜಾತಿ ವಿಷಬೀಜ ಬಿತ್ತಿ ಶಾಂತಿ ಕದಡುತ್ತಿದೆ. ಇಂತಹ ಕುಕೃತ್ಯಗಳಿಗೆ ಕೋಮುವಾದಿ ಬಿಜೆಪಿ ಸರ್ಕಾರ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದೇಶದ ಕಾನೂನು ಎಲ್ಲರಿಗೂ ಒಂದೇ, ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ವಿರೋಧಿಗಳನ್ನು ಹತ್ತಿಕ್ಕದೆ ಕಣ್ಮುಚ್ಚಿ ಕುಳಿತಂತೆ ಸರ್ಕಾರ ನಾಟಕವಾಡುತ್ತಿದೆ. ಸಂವಿಧಾನ ವಿರೋಧಿಯಾಗಿ ನಡೆದುಕೊಂಡವರನ್ನು ಗಡಿಪಾರು ಮಾಡಬೇಕು. ಇದಕ್ಕೆ ತದ್ವಿರುದ್ದವಾಗಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆಯೆಸೆದ ಕಿಡಿಗೇಡಿಗಳ ವಿರುದ್ದ ಕಾನೂನು ರಿತ್ಯಾ ಕ್ರಮ ಕೈಗೊಳ್ಳದೇ ಪೊಲೀಸರನ್ನು ಅಸ್ತçವಾಗಿ ಬಳಸಿಕೊಂಡು ಸರ್ಕಾರ ಕೋಮುವಾದಿಗಳಿಗೆ ರಕ್ಷಣೆ ನೀಡಲು ಹೊರಟಿದೆ.
ಸಮಾಜದಲ್ಲಿ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರ ನಡೆ ಖಂಡನಾರ್ಹ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ದ ಅವಹೇಳನಕಾರಿಯಾಗಿ ವರ್ತಿಸಿದ ಕಾರ್ಯಕರ್ತರನ್ನು ಶಿಕ್ಷಿಸದ ಸರ್ಕಾರ ರಾಜ್ಯದ ಜನರ ಕ್ಷಮೆ ಕೇಳಬೇಕು. ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು, ಬಿಜೆಪಿ ಕಾರ್ಯಕರ್ತರ ಗೂಂಡಾವರ್ತನೆಗೆ ಕಡಿವಾಣ ಹಾಕಬೇಕು ಎಂದು ಶ್ರೀಧರ್‌ಗೌಡ ಆಗ್ರಹಿಸಿದರು.
ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ಮುಖ್ಯಮಂತ್ರಿ ಕೊಡಗಿಗೆ ಭೇಟಿ ನೀಡಿ ಸ್ಥಳದಲ್ಲೇ ಪರಿಹಾರ ಘೋಷಣೆ ಮಾಡಬೇಕಿತ್ತು. ಕೊಡಗಿನ ಜನರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಕಿಡಿಗೇಡಿ ಕೃತ್ಯಗಳಿಗೆ ಹುನ್ನಾರ ಹೂಡುತ್ತಿದೆ. ಮೊದಲು ಮಳೆಯಿಂದ ಉಂಟಾಗಿರುವ ಹಾನಿಗೆ ಪರಿಹಾರ ಒದಗಿಸಿ ಕೊಡಗು ಜಿಲ್ಲೆ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.
0 Comments