ಅರಕಲಗೂಡು: ಅತಿಯಾದ ಮಳೆಗೆ ಮಲ್ಲಿಪಟ್ಟಣ ಹೋಬಳಿಯಲ್ಲಿ ಸೂರು ಕಳೆದುಕೊಂಡ ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳಲು ಅಧಿಕ ಪರಿಹಾರದ ಮೊತ್ತ ಒದಗಿಸಿಕೊಡಬೇಕು ಎಂದು ಅದಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಸಿಂಗನಕುಪ್ಪೆ ಮನವಿ ಮಾಡಿದರು.
ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ಭಾನುವಾರ ಮಳೆಗೆ ಮನೆಗಳನ್ನು ಕಳೆದುಕೊಂಡ ಸಂತ್ರಸ್ಥ ಕುಟುಂಬಗಳಿಗೆ ಸಹಾಯ ಧನ ವಿತರಿಸಿ ಮಾತನಾಡಿದ ಅವರು, ಕೊಡಗಿನ ಗಡಿಗೆ ಹೊಂದಿಕೊಂಡಿರುವ ಮಲೆನಾಡು ಭಾಗದ ಮಲ್ಲಿಪಟ್ಟಣ ಹೋಬಳಿಯಲ್ಲಿ ಕಳೆದೊಂದು ತಿಂಗಳಿನಿAದ ನಿರಂತರ ಮಳೆ ಸುರಿದು ರೈತಾಪಿ ವರ್ಗದವರಿಗೆ ಅಪಾರ ಹಾನಿ ಉಂಟು ಮಾಡಿದೆ. ಕಳೆದ ಐವತ್ತು ವರ್ಷಗಳಿಂದ ಬೀಳದಷ್ಟು ಭಾರಿ ಮಳೆ ಬಿದ್ದು ಜನತೆ ಅತಿವೃಷ್ಟಿ ಸಂಕಷ್ಟದಲ್ಲಿದ್ದಾರೆ. ಸಾಕಷ್ಟು ಹಳ್ಳಿಗಳು ಶೀತಪೀಡಿತವಾಗಿ ವಾಸದ ಮನೆ ಗೋಡೆಗಳು ಬೀಳುವ ಸ್ಥಿತಿಗೆ ತಲುಪಿವೆ. ಮನೆಯೊಳಗೆ ನೀರುಕ್ಕಿ ಕೆಲಗಳಲೆಯಲ್ಲಿ ನೋಡ ನೋಡುತ್ತಿದ್ದಂತೆಯೇ ಸುರಿವ ಮಳೆಯಲ್ಲೇ ಎರಡು ಮನೆ ಗೋಡೆಗಳು ಕುಸಿದು ಅಪಾರ ನಷ್ಟವಾಗಿದೆ. ಸರ್ಕಾರ ನೋಂದವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಮಳೆಗಾಲದ ಹೊಡೆತಕ್ಕೆ ಸಿಲುಕುವ ಮಲೆನಾಡು ಭಾಗದ ಮಲ್ಲಿಪಟ್ಟಣ ಹೋಬಳಿಯಲ್ಲಿ ಮುರಿದು ಬಿದ್ದ ಮನೆಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರ ನೀಡುತ್ತಿರುವ ಪರಿಹಾರ ಸಾಕಾಗುತ್ತಿಲ್ಲ. ಪರಿಹಾರದ ಮೊತ್ತ ಹೆಚ್ಚಿಸಿ ನಿರ್ಗತಿಕರಿಗೆ ನೆರವಾಗಬೇಕು. ಕೆಲಗಳಲೆಯಲ್ಲಿ ಮಳೆಗೆ ಮನೆ ಕಳೆದುಕೊಂಡ ಎರಡು ಕುಟುಂಬಗಳಿಗೆ ಸೂರು ಕಟ್ಟಿಕೊಳ್ಳಲು ಸಿಮೆಂಟ್ ನೀಡುವುದಾಗಿ ಭರವಸೆ ನೀಡಿದರು.
ಗ್ರಾಮದ ರಾಜು, ಅಪ್ಪಣ್ಣ ಅವರಿಗೆ ಸಹಾಯ ಧನ ವಿತರಿಸಲಾಯಿತು. ಕಾಕೋಡನಹಳ್ಳಿ ಮಂಜು, ಪ್ರವೀಣ್, ಜಯರಾಂ, ಮನೋಹರ್, ಸ್ವಾಮೀಗೌಡ, ದಿವಾಕರ್, ಉದಯ್, ಚೇತನ್, ನಾಗರಾಜ್, ಪ್ರಕಾಶ್, ಕೀರ್ತಿ, ಸುನಿಲ್, ಸುರೇಶ್, ಪ್ರತಾಪ್, ಪ್ರದೀಪ್ ಇತರರಿದ್ದರು.
0 Comments