ಅರಕಲಗೂಡು: ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನನ್ನ ಗುರಿ, ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸ್ಪೂರ್ತಿ ಪಡೆದು ಪ್ರತಿ ಹಳ್ಳಿಗಳಿಗೆ ಸ್ವಾತಂತ್ರ‍್ಯೋತ್ಸವ ಪಾದಯಾತ್ರೆ ಕೈಗೊಂಡು ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ಮೂಲಕ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಶ್ರಮಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್ ಗೌಡ ತಿಳಿಸಿದರು.
ಸ್ವಾತಂತ್ರ‍್ಯ ಅಮೃತೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಪಾದಯಾತ್ರೆ ಸೋಮವಾರ ತಾಲೂಕಿಗೆ ಆಗಮಿಸಿದ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಆದೇಶದ ಮೇರೆಗೆ ಕೆಲವರು ಐವತ್ತರಿಂದ ನೂರು ಕಿಮೀ ವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ನಾನು ಕಳೆದ 2012ರಲ್ಲಿ ಬೆಂಗಳೂರಿನಿಂದ ಬಳ್ಳಾರಿ ತನಕ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಕಾರಣಕರ್ತರಾದ ಸಿದ್ದರಾಮಯ್ಯ ಅವರ ಆದರ್ಶಗಳಿಂದ ಸ್ಪೂರ್ತಿ ಪಡೆದು ಕ್ಷೇತ್ರದ ಪ್ರತಿ ಹಳ್ಳಿಗೂ ತೆರಳಿ ಪಾದಯಾತ್ರೆ ಕೈಗೊಳ್ಳಲಾಗಿದೆ. ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ತ್ಯಾಗ ಬಲಿದಾನ ಮಾಡಿದ ವೀರರನ್ನು ಸ್ಮರಿಸಲಾಗುತ್ತಿದೆ ಎಂದರು.
ಬಡವರು, ಜನ ಸಾಮಾನ್ಯರ ಬದುಕಿನ ಏಳಿಗೆಗೆ ಕಾಂಗ್ರೆಸ್ ಮಹತ್ತರವಾದ ಸೇವೆ ನೀಡಿದೆ. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ರಾಷ್ಟ್ರದ ಉನ್ನತಿಗೆ ಉತ್ತಮ ಆಡಳಿತ ನೀಡಿದೆ. ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸ್ವಾತಂತ್ರ‍್ಯ ಅಮೃತ ಮಹೋತ್ಸವ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಆಚರಿಸುತ್ತಿರುವುದು ಮತ್ತೊಂದು ಸಂತೋಷದ ಸಂಗತಿ. ಪಾದಯಾತ್ರೆ ಒಂದು ಹಂತ ಮುಗಿಸಿದ್ದು ಆ. 3ರಂದು ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕಾಗಿ ದಾವಣಗೆರೆಗೆ ತೆರಳಲಾಗುವುದು. ಆ 5ರಂದು ಹೆತ್ತಗೌಡನಹಳ್ಳಿ ಗ್ರಾಮದಿಂದ ಸ್ವಾತಂತ್ರ್ಯೋತ್ಸವ ಪಾದಯಾತ್ರೆ ಪುನರಾರಂಭಿಸಲಾಗುವುದು ಎಂದು ತಿಳಿಸಿದರು.
ಕಳೆದ ನಾಲ್ಕು ದಿನಗಳಿಂದ ನಡೆದ ಪಾದಯಾತ್ರೆ ಯಶಸ್ವಿಗೆ ಜನರ ಬೆಂಬಲ ಸಿಕ್ಕಿದೆ ಎಂದರು.
ಮುಖಂಡ ಎಂ.ಕೆ. ಶೇಷೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್, ಅಪಾರ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
0 Comments