ಅರಕಲಗೂಡು: ಇದನ್ನು ರಸ್ತೆ ಎನ್ನಬೇಕೊ, ಗುಂಡಿ ಹೊಂಡ ಎನ್ನಬೇಕೋ ಗೊತ್ತಿಲ್ಲ, ಆದರೆ ನಿತ್ಯದ ನರಕ ಮಾತ್ರ 30 ವರ್ಷಗಳಿಂದ ತಪ್ಪಿಲ್ಲ, ಹೌದು ತಾಲೂಕಿನ ಕೊಣನೂರು- ಬಸವಾಪಟ್ಟಣ ಮಾರ್ಗದ ರಸ್ತೆ ಗುಂಡಿ ಹೊಂಡಗಳ ಸಾಮ್ರಾಜ್ಯವಾಗಿದ್ದು ಯಮಲೋಕದ ಹೆದ್ದಾರಿಯಾಗಿ ಮಾರ್ಪಟ್ಟಿದೆ.
ಕಳೆದ 30 ವರ್ಷಗಳಿಂದ ಅಭಿವೃದ್ಧಿ ಕಾಣದೇ ಸಂಪೂರ್ಣ ಹಾಳಾಗಿರುವ ರಸ್ತೆ ಕಳೆದ ಒಂದು ತಿಂಗಳಿನಿAದ ನಿರಂತರವಾಗಿ ಸುರಿದ ಮಳೆಗೆ ಕೆಸರಿನ ಹೊಂಡವಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳು ಬಾಯ್ತೆರೆದುಕೊಂಡು ವಾಹನಗಳನ್ನು ಕೆಸರಿನ ಪ್ರಪಾತದ ಕಂದಕಕ್ಕೆ ಇಳಿಸಿದಂತಾಗಿ ಪ್ರಯಾಣಿಕರಿಗೆ ನರಕದ ಶಿಕ್ಷೆ ನೀಡುತ್ತಿದೆ.
ಕ್ಷೇತ್ರದಲ್ಲಿ ಇದುವರೆಗೆ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಿ ಮತ್ತು ಮಾಜಿ ಶಾಸಕರು ಹಲವಾರು ದಶಕಗಳ ಕಾಲ ಹದಗೆಟ್ಟು ಹೋಗಿದ್ದ ರಸ್ತೆ ಅಭಿವೃದ್ಧಿಗೆ ಮನಸ್ಸು ಮಾಡದ ಪರಿಣಾಮವನ್ನು ಸಾರ್ವಜನಿಕರು ಈಗ ಅನುಭವಿಸುವ ದುಸ್ಥಿತಿ ಬಂದೊದಗಿದೆ.
ಮಾಗಡಿ- ಸೋಮವಾರಪೇಟೆ ಮಾರ್ಗವಾಗಿ ಹಾದು ಹೋಗಿರುವ ರಸ್ತೆಗೆ ಅಲ್ಲಲ್ಲಿ ಡಾಂಬರು ಹಾಕಲಾಗಿದೆ. ಇನ್ನುಳಿದಿರುವ ಭಾಗದಲ್ಲಿ ಕೊಣನೂರು ಕಾಲುವೆ ತಿರುವು, ರಾಮನಾಥಪುರ ದೊಡ್ಡ ಸೇತುವೆಯಿಂದ ಐಬಿ ವೃತ್ತ, ಬಸವಾಪಟ್ಟಣ ಸರ್ಕಾರಿ ಆಸ್ಪತ್ರೆ, ಹಳೇ ಸಂತೆ ಮೈದಾನ, ಬೆಳವಾಡಿ ಸರ್ಕಲ್ ಹಾಗೂ ಕಾಳೇನಹಳ್ಳಿ ಸರ್ಕಲ್‌ನಲ್ಲಿ ಹೆಜ್ಜೆಗೊಂದು ಗುಂಡಿಗಳು ಅಗಲವಾಗಿ ಕೆಸರಿನ ಹೊಂಡದೊಳಗೆ ಪ್ರಯಾಣಿಕರನ್ನು ಎತ್ತೆತ್ತಿ ಕುಲುಕುತ್ತಿವೆ. ವಾಹನಗಳು ಎದುರು ಬದುರಾಗಿ ಕೆಸರಿನ ಅಭಿಷೇಕವಾಗುತ್ತಿದ್ದು ಮಳೆಯಲ್ಲಿ ಚಲಿಸುವ ಸವಾರರು ಜೀವ ಕೈಯಲ್ಲಿ ಹಿಡಿದು ಈ ಮಾರ್ಗದ ರಸ್ತೆ ಪ್ರಯಾಣವೇ ಸಾಕು ಎಂದು ಎದುರಿಸಿನಿಂದ ಶಪಿಸುತ್ತಾ ಓಡಾಡುತ್ತಿದ್ದಾರೆ. ಕೆಲವರು ಗುಂಡಿ ಇಳಿಸುವುದನ್ನು ತಪ್ಪಿಸುವ ಸಲುವಾಗಿ ದಿಕ್ಕು ತಪ್ಪಿದವರಂತೆ ವಿರುದ್ದ ಧಿಕ್ಕಿನಲ್ಲಿ ಚಲಿಸುತ್ತಿದ್ದು ಹಾಳಾದ ಈ ರಸ್ತೆ ಅಕ್ಷರಶಃ ಪ್ರಯಾಣಿಕರಿಗೆ ಯಮಲೋಕದ ರಹದಾರಿಯಾಗಿ ಬದಲಾಗಿದೆ.
ಮಳೆಗಾಲಕ್ಕೂ ಮುನ್ನ ಗುಂಡಿ ಹೊಂಡಗಳಿಗೆ ಜಲ್ಲಿ ಸುರಿದು ಸಮತಟ್ಟುಗೊಳಿಸಿದ್ದರೆ ಸಂಚಾರಕ್ಕೆ ಇಷ್ಟೊಂದು ಸಂಚಕಾರ ಬಂದೊದಗುತ್ತಿರಲಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷö್ಯದಿಂದ ಗುಂಡಿ ರಸ್ತೆಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ಹೇಳಿಕೆ)
ಮಳೆಗಾಲದಲ್ಲಿ ಕಳೆದೊಂದು ತಿಂಗಳಿನಿAದ ಹಾಳಾದ ಕೊಣನೂರು, ರಾಮನಾಥಪುರ, ಬಸವಾಪಟ್ಟಣ ಮಾರ್ಗದ ಕೆಸರಿನ ಗುಂಡಿ ರಸ್ತೆಯಲ್ಲಿ ಪ್ರಯಾಣಿಕರ ಪಾಡು ಹೇಳತೀರದಾಗಿದೆ. ಕಳೆದ ಮೂರ್ನಾಲ್ಕು ದಶಕಗಳಿಂದಲೂ ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳು ನಮ್ಮ ತಾಲೂಕಿನ ಯಾವ ರೀತಿ ದುಸ್ಥಿತಿಗೆ ದೂಡಿದ್ದಾರೆ ಎಂಬುದಕ್ಕೆ ಈ ಮಾರ್ಗದ ಹೊಂಡದ ರಸ್ತೆ ಸಾಕ್ಷಿಯಾಗಿದೆ. ಒಂದು ತಿಂಗಳಿನಿAದ ಸುಮ್ಮನಿದ್ದು ಈಗ ನೆಪ ಮಾತ್ರಕ್ಕೆ ಅಲ್ಲಲ್ಲಿ ಜಲ್ಲಿ ಎರಚಿ ಗುಂಡಿಗಳಿಗೆ ತೇಪೆ ಹಾಕಲಾಗುತ್ತಿದೆ. ಜನಪ್ರತಿನಿಧಿಗಳಿಗೆ ಜನರ ಸಂಕಷ್ಟ ಅರಿತುಕೊಳ್ಳುವ ವ್ಯವದಾನ ಇಲ್ಲದಿರುವ ಕಾರಣ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
- ಎಂ.ಟಿ. ಕೃಷ್ಣೇಗೌಡ, ಕಾಂಗ್ರೆಸ್ ಮುಖಂಡರು.
0 Comments