ಅರಕಲಗೂಡು: ಭಾರಿ ಮಳೆಗೆ ತಾಲೂಕಿನ ಕೊಣನೂರು ದೊಡ್ಡಕೆರೆ ಏರಿ ಡಾಂಬರು ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡು ಅಪಾಯಕ್ಕೆ ಎದುರು ನೋಡುತ್ತಿದೆ.
ಕೊಣನೂರಿನಿಂದ ಕೆರೆಕೋಡಿ ಮಾರ್ಗವಾಗಿ ಕೆರೆ ಏರಿಗೆ ಡಾಂಬರು ರಸ್ತೆ ನಿರ್ಮಿಸಲಾಗಿದೆ. ಕೆಲ ದಿನಗಳಿಂದ ಅಬ್ಬರಿಸುತ್ತಿರುವ ಭಾರಿ ಮಳೆಗೆ ಕೆರೆ ಒಡಲು ತುಂಬಿ ತುಳುಕುತಿದೆ. ಕೆರೆ ಏರಿ ಹಳ್ಳದ ತೋಟದ ಕಡೆ ಕುಸಿದಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದು ಡಾಂಬರು ರಸ್ತೆ ಬಿರುಕು ಬಿಟ್ಟಿದೆ.
ತಿರುವಿನಿಂದ ಕೂಡಿರುವ ಕೆರೆ ಏರಿ ಮೇಲೆ ನಿತ್ಯ ಸಾವಿರಾರು ವಾಹನಗಳು ಬಿಡುವಿಲ್ಲದಂತೆ ಓಡಾಡುತ್ತವೆ. 287 ಹೆಕ್ಟೇರ್ ವಿಸ್ತಾರವಾದ ದೊಡ್ಡ ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಸುಮಾರು 40 ಅಡಿ ಆಳ ತೋಟದ ಕಡೆಗೆ ಹಳ್ಳದ ಕಂದಕವಿದೆ. ಕೆರೆ ಏರಿ ಒಡೆದರೆ ಭಾರಿ ಅನಾಹುತ ಒದಗಲಿದೆ.
ಕೊಣನೂರು ಹಾರಂಗಿ ಪುನರ್ವಸತಿ ಉಪ ವಿಭಾಗದ ಸಹಾಯಕ ಕಾರ್ಯಪಾಲ ಇಂಜಿನಿಯರ್ ಮಾತನಾಡಿ, ರಸ್ತೆಗೆ ಡಾಂಬರು ಹಾಕುವಾಗ ಕಳಪೆ ಮಣ್ಣು ಸುರಿಯಲಾಗಿದೆ. ಸಮರ್ಪಕವಾಗಿ ರೋಲ್ ಮಾಡದೆ ಇದೀಗ ಮಳೆಗೆ ಡಾಂಬರು ಬಿರುಕು ಬಿಟ್ಟಿದೆ. ಕೆರೆ ಭದ್ರವಾಗಿದ್ದು ಕುಸಿಯುತ್ತಿಲ್ಲ. ಕಳಪೆ ರಸ್ತೆ ನಿರ್ಮಿಸಿದ ಗುತ್ತಿಗೆದಾರನಿಂದ ಲೋಕೋಪಯೋಗಿ ಇಲಾಖೆ ರಸ್ತೆ ಸರಿಪಡಿಸಬೇಕು ಎಂದರು.
ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಣೇಶ್ ಮಾತನಾಡಿ, ಮಳೆಗೆ ಕೆರೆ ಏರಿ ಕುಸಿದು ಡಾಂಬರು ಬಿರುಕು ಬಿಟ್ಟಿದೆ. ಮಳೆಗಾಲ ಕಳೆದ ನಂತರ ಡಾಂಬರು ದುರಸ್ತಿ ಪಡಿಸಿ ಸರಿಪಡಿಸಲಾಗುವುದು ಎಂದರು.
0 Comments