ಮಳೆ ಹಾನಿ ವೀಕ್ಷಿಸಿದ ಸಚಿವ ಗೋಪಾಲಯ್ಯ: ಪರಿಹಾರದ ಭರವಸೆ

ಅರಕಲಗೂಡು: ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಹಾರ ಒದಗಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಅದೇಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ತಾಲೂಕಿನ ಮಳೆ ಹಾನಿ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸದ್ಯಕ್ಕೆ 160 ಮನೆಗಳಿಗೆ ಹಾನಿ ಯಾಗಿದ್ದು ಅರಕಲಗೂಡು ಮತ್ತು ಹೊಳೆನರಸೀಪುರ ತಾಲೂಕಿನಲ್ಲಿ ಹೆಚ್ಚು ಹಾಳಾಗಿವೆ. ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಸದ್ಯಕ್ಕೆ 2 ಕೋಟಿ ರೂ ಪರಿಹಾರದ ಬಿಡುಗಡೆ ಮಾಡಲಾಗಿದೆ. ಮನೆಗಳು ಹಾಳಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತಕ್ಷಣಕ್ಕೆ 10  ಸಾವಿರ ಪರಿಹಾರ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮಳೆ ಹಾನಿ ಕುರಿತು ಸಮಗ್ರ ವರದಿ ಪಡೆದು ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಳೆಯಿಂದ ಬೆಳೆ ಹಾನಿ ಯಾಗಿದ್ದು ಅಧಿಕಾರಿಗಳಿಂದ ವರದಿ ಪಡೆದ ನಂತರ ಪರಿಹಾರ ಒದಗಿಸಲಾಗುವುದು ಎಂದರು.

ಶಿರಾಡಿ ಘಾಟಿ ರಸ್ತೆ ಸಮಸ್ಯೆ ಮುಕ್ತಿ ದೊರಕಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಸಚಿವರನ್ನು ಅಡ್ಡಗಟ್ಟಿದ ಗ್ರಾಮಸ್ಥರು: ಹೊಳೆನರಸೀಪುರ ತಾಲೂಕಿನಲ್ಲಿ ಮಳೆ ಹಾನಿ ವೀಕ್ಷಿಸಿ ಅರಕಲಗೂಡು ತಾಲೂಕು ಮಾರ್ಗವಾಗಿ ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರನ್ನು ಯಾಚನಕುಪ್ಪೆ ಗ್ರಾಮಸ್ಥರು ಅಡ್ಡಗಟ್ಟೆ ತಮ್ಮೂರಿನ ಶಾಲೆ ಸ್ಥಿತಿಗತಿ ಪರಿಶೀಲಿಸುವಂತೆ ಆಗ್ರಹಿಸಿದರು. ಜನರ ಒತ್ತಾಯದ ಮೇರೆಗೆ ಶಾಲೆಗೆ ತೆರಳಿ ವೀಕ್ಷಿಸಿದ ಸಚಿವರ ಶಾಲೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಿರೀಶ್ ಅವರಿಗೆ ಸೂಚನೆ ನೀಡಿದರು.

ತಾಲೂಕಿನ ಬಸವನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಮಳೆಗೆ ಮನೆಗಳ ಗೋಡೆ ಕುಸಿದು ಹಾನಿಗೀಡಾಗಿ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳನ್ನು ಸಚಿವರು ಆಲಿಸಿದರು. 

ಬಿಜೆಪಿ ಮುಖಂಡ ಎಚ್. ಯೋಗಾರಮೇಶ್, ಜಿಪಂ ಸಿಇಒ ಕಾಂತರಾಜ್, ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ರಾಜಸ್ವ ನಿರೀಕ್ಷಕ ಸಿ. ಸ್ವಾಮಿ, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

Post a Comment

0 Comments