ಅರಕಲಗೂಡು: ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ಕಟ್ಟಿ ಜನರ ಸ್ವಾಭಿಮಾನದ ಬದುಕಿಗೆ ಸ್ಪೂರ್ತಿ ನೀಡಿ ನಾಡಿನ ಹಿರಿಮೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದ ಕೆಂಪೇಗೌಡರ ಚರಿತ್ರಾರ್ಹ ಸಾಧನೆಗಳನ್ನು ಪುಸ್ತಕದ ರೂಪದಲ್ಲಿ ಪ್ರತಿ ಮನೆಗಳಿಗೆ ತಲುಪಿಸುವ ಕಾಯಕವಾಗಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಸಂಜೆ ಕೆಂಪೇಗೌಡ ಜಯಂತ್ಯುತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚ ನೀಡಿದ ಅವರು, ನಾಡಾಳುವ ರಾಜ ನಾಸ್ತಿಕನಾದರೂ ಬಹುಮಂದಿಯ ಭಾವನೆಗಳನ್ನು ಗೌರವಿಸಬೇಕು. ಕೆಂಪೇಗೌಡರು ಬಹುದೊಡ್ಡ ದೂರದೃಷ್ಟಿಯುಳ್ಳ ವ್ಯಕ್ತಿಯಾಗಿದ್ದು ಎಲ್ಲಾ ಸಮುದಾಯದವರಿಗೂ ಪೇಟೆ ನಿರ್ಮಿಸಿದರೆ ಹೊರತು ಒಕ್ಕಲಿಗರಿಗೇನು ವಿಶೇಷವಾಗಿ ಕಟ್ಟಿಕೊಟ್ಟಿರಲಿಲ್ಲ. ಕಾರಣ, ನಾಡನ್ನಾಳುವ ದೊರೆಗೆ ಸರ್ವ ಸಮುದಾಯ, ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕಾದ್ದು ಅನಿವಾರ್ಯ ಮತ್ತು ಕರ್ತವ್ಯವೂ ಹೌದು. ಕೆಂಪೇಗೌಡರು ಬಹಳ ಕಾಲಕ್ಕೆ ಮಾನ್ಯರು. ಕೇವಲ ರಾಜಕಾರಣ ಮಾಡಿ ನಾಡನ್ನು ಕಟ್ಟಿದವರಲ್ಲ. ಧಾರ್ಮಿಕ ಪ್ರಭುವಾಗಿದ್ದರು. ಆಸ್ತಿಕನಾಗಿ ಆಧ್ಯಾತ್ಮಿಕತೆ ಮೂಡಿಸಿದರೆ ಯಾವದೇ ಕೋಟಿ ಕೋಟಿ ಶಕ್ತಿಗೂ ಸರಿಸಮವಲ್ಲ. ಕೆಂಪೇಗೌಡರು ನಾಡನ್ನ ಕಟ್ಟಿದಷ್ಟೇ ಅಲ್ಲ. ಧರ್ಮವಂತರು, ಆಧ್ಯಾತ್ಮಿಕತೆಯಲ್ಲಿ ಸಾಗುವಂತೆ ತೋರಿಸಿಕೊಟ್ಟವರು. ಪ್ರತಿ ವರ್ಷ ಆಧಿ ಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಕಾಣಿಕೆ ಅರ್ಪಿಸಿ, ಬೈರವೇಶ್ವರನ ಧರ್ಶನ ಮಾಡಿ ಹೋಗುತ್ತಿದ್ದರು.
ಭಕ್ತಿ, ಶ್ರದ್ಧೆ ಕಟ್ಟಿಕೊಟ್ಟು ಬೆಂಗಳೂರಿನಲ್ಲಿ 64 ಪೇಟೆಗಳನ್ನು ನಿರ್ಮಿಸಿದ ಕೆಂಪೇಗೌಡರ ಜಯಂತಿಯನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಬಾರದು. ಆದರ್ಶ ವ್ಯಕ್ತಿಗಳನ್ನು ಮರೆತರೆ ಇತಿಹಾಸ ಉಳಿಯಲಾರದು. ಮಹಾನ್ ಸಾಧಕರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವAತಾಗಬೇಕು. ಕೆಂಪೇಗೌಡರ ಕುರಿತಾದ ಚಿಕ್ಕ ಚಿಕ್ಕ ಪುಸ್ತಕಗಳನ್ನು ರಚಿಸಿ ಎಲ್ಲ ಮನೆಗಳಿಗೆ ತಲುಪಿಸುವಂತಾಗಬೇಕು ಎಂದು ತಿಳಿಸಿದರು.
ಅಮೇರಿಕ ಅಧ್ಯಕ್ಷರಾಗಿದ್ದ ಒಬಾಮಾ ಅವರು ಶಾಲಾ ಕಾಲೇಜಿಗೆ ಹೋದರೆ ಬೆಂಗಳೂರಿಗೆ ಹೋಗಿ ಅಲ್ಲಿನ ಹುಡುಗರು ಹೇಗೆ ಓದುತ್ತಾರೆಂದು ಕಲಿತುಕೊಂಡು ಬನ್ನಿ, ನೀವು ಹೀಗೆ ಬೇಕಾಬಿಟ್ಟಿ ಓದಿದರೆ ಬೆಂಗಳೂರು ಮತ್ತು ಭಾರತದ ಮಕ್ಕಳು ಬಂದು ಇಲ್ಲಿನ ಅವಕಾಶಗಳನ್ನು ಕಿತ್ತುಕೊಂಡು ಬಿಡುತ್ತಾರೆ ಎಂದು ಹೇಳುತ್ತಿದ್ದರಂತೆ. ಈ ಕಾರಣದಿಂದಾಗಿ ಕೆಂಪೇಗೌಡರನ್ನು ನೆನಪಿಸಿಕೊಳ್ಳಬೇಕು ಎಂದರು.
ಲಂಡನ್ ಸುಂದರ ನಗರ. ಭಾರತ ದೇಶವನ್ನು 200 ವರ್ಷ ಅಳಿದವರು ಆಂಗ್ಲರು. ಆದರೆ, ಲಂಡನ್‌ನ ಒಟ್ಟು ವಿನ್ಯಾಸ ನೋಡಿದರೆ ಅದಕ್ಕೂ ಪೂರ್ವದಲ್ಲೇ ಕೆಂಪೇಗೌಡ ಬೆಂಗಳೂರು ಕಟ್ಟಿದ ಸಂದರ್ಭದಲ್ಲಿ ಲಂಡನ್‌ನ ಇಂದಿಂದ ಅಸ್ತಿತ್ವ ಇರಲಿಲ್ಲ. ಆದರೆ, ಕೆಂಪೇಗೌಡರು ಬೆಂಗಳೂರನ್ನು ಯಾವ ವಿನ್ಯಾಸದಲ್ಲಿ ಮಾಡಿದರೋ ಅದೇ ವಿನ್ಯಾಸ ಲಂಡನ್ ನಗರಕ್ಕಿದೆ. ಹಾಗಾಗಿ ಅವರದು ಬಹು ದೂರದೃಷ್ಟಿಯುಳ್ಳ ವ್ಯಕ್ತಿತ್ವ. ಮಕ್ಕಳಿಗೆ ಕೆಂಪೇಗೌಡ ಬಗ್ಗೆ ಹೆಚ್ಚು ತಿಳಿಸಬೇಕು ಎಂದು ಹೇಳಿದರು.
ಪ್ರತಿ ರಾಜಕಾರಣಿ ಶ್ರದ್ದೆ, ಕಾಳಜಿ ಹೊಂದಿದ್ದರೆ ಉತ್ತಮ ಕೆಲಸಗಳಾಗುತ್ತವೆ. ಈ ವೇಳೆ ಎಚ್. ಡಿ. ದೇವೇಗೌಡರು ಇಳಿವಯಸ್ಸಿನಲ್ಲೂ ರಾಜಕೀಯ ಏಕೆ ಬೇಕೆಂದು ಕೆಲವರು ಕೇಳುತ್ತಾರೆ. ಇದಕ್ಕೆ ಉದಾಹರಣೆ ಎಂದರೆ, 85 ವರ್ಷದ ಸಿಎನ್‌ಆರ್ ರಾವ್ ಅವರನ್ನು 85 ವರ್ಷ ಇಳಿವಯಸ್ಸಿನಲ್ಲೂ ಸಂಶೋಧನೆ ಮಾಡುತ್ತಿದ್ದೀರಲ್ಲ ಎಂದು ಕೆಲವರು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ರಾವ್ ಅವರು, ಯುವಕರು ಐಟಿ- ಬಿಟಿ ಎಂದು ಹೋಗುತ್ತಿದ್ದಾರೆ. ಸಂಶೋಧನ ಕ್ಷೇತ್ರದಲ್ಲಿಲ್ಲ. ಮೂಲ ಸಂಶೋಧನೆಗೆ ಒತ್ತು ನೀಡುತ್ತಿಲ್ಲ. ಯಾವ ದೇಶ ಮೂಲ ಸಂಶೋಧನೆಗೆ ಒಟ್ಟು ನೀಡುವುದಿಲ್ಲವೋ ಆಧುನಿಕ ಜಗತ್ತಿನಲ್ಲಿ ಉದ್ದಾರವಾಗಲು ಸಾಧ್ಯವಿಲ್ಲ. ಕಾರಣ ನೀವು ಎಷ್ಟೇ ದೊಡ್ಡ ವಸ್ತು ತಯಾರಿಸಿದರು ಸಣ್ಣ ಮೆದುಳಿನಂತಿರುವ ಸಂಶೋಧನೆ ಮಾಡಿದ್ದಕ್ಕೆ ಬೆಲೆಯೇ ಹೊರತು ಹೊರಗಿನ ದೇಹ ತಯಾರಿಸಿದ್ದಕ್ಕಲ್ಲ. ನಮ್ಮ ದೇಶದ ಯುವಕರು ದೇಶದ ಶಕ್ತಿಯಾಗಿರುವ ಮೂಲ ಸಂಶೋಧನೆ ಕಡೆಗೆ ಗಮನ ಹರಿಸುವುದಿಲ್ಲವೋ ಅಲ್ಲಿವರೆಗೆ ನಾನು ಸಂಶೋಧನ ಕ್ಷೇತ್ರದಲ್ಲಿ ಇರುವುದು ಅನಿವಾರ್ಯ ಎಂದು ಹೇಳಿದ್ದರು. ಇಂದಿಗೂ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ದೇವೇಗೌಡರು ಅಂತಹ ಕಳಕಳಿ ಹೊಂದಿದ್ದು, ಇಂತಹ ರಾಜಕಾರಣಿಗಳು ಸಾಮಾಜಿಕ ಕ್ಷೇತ್ರಕ್ಕೆ ಅಗತ್ಯವಿದೆ. ಅದೇ ರೀತಿ ಯುವಕರು ಹೆಚ್ಚು ಬಂದರೆ ರಾಜಕೀಯ ಪರಿಸ್ಥಿತಿ ಬದಲಾಗುತ್ತದೆ. ಆದರೆ, ಇತ್ತೀಚಿಗೆ ಕೆಲವು ವಿದ್ಯಾವಂತ ಯುವಕರು ರಾಜಕೀಯಕ್ಕೆ ಬಂದಿದ್ದು, ಅವರನ್ನು ಗಮನಿಸಿದರೆ ಇದ್ದ ಭರವಸೆಯೂ ಇಲ್ಲವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷಾತೀತವಾಗಿ ತಾಲೂಕಿನಲ್ಲಿ ಅಧಿಕೃತ ಒಕ್ಕಲಿಗರ ಸಂಘ ಅಸ್ತಿತ್ವಕೆ ಬರಲಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿ, ಕೆಂಪೇಗೌಡರು ರಾಜಧಾನಿ ಸ್ಥಾಪಿಸುವ ಸಲುವಾಗಿಯೇ ಹಂಪಿಯ ಗುಡ್ಡ ಮೇಲೆ ತೆರಳಿ ನಗರ ವೀಕ್ಷಿಸುತ್ತಿದ್ದರಂತೆ. ಅವರ ದೂರದೃಷ್ಟಿ ಫಲವಾಗಿ ಇಂದು ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಬೃಹತ್ತಾಗಿ ಬೆಳೆದಿದೆ ಎಂದರು.
ಸರ್ಕಾರದ ನಿಲುವಿನಿಂದ ಪಠ್ಯ ಪುಸ್ತಕದ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ವ್ಯಕ್ತಿಗಳ ವ್ಯಕ್ತಿತ್ವ, ಆದರ್ಶಗಳನ್ನು ಪರಿಚಯಿಸುವ ವ್ಯವಸ್ಥೆಯಾಗಬೇಕು ಎಂದರು. ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರ ಬಗ್ಗೆ ನಕಾರಾತ್ಮಕ ಭಾವನೆ ತಳೆಯದೆ ಸಮಾಜ ನೆನೆಪಿಸಿಕೊಳ್ಳುವ ಅವಶ್ಯಕತೆ ಕುರಿತು ಒತ್ತಿ ಹೇಳಿದರು.
ಸಾಹಿತಿ ತಕಲಾಡು ಚಿಕ್ಕ ರಂಗೇಗೌಡ ಮಾತನಾಡಿ, ಶ್ರೀಗಳ ಸಹಕಾರದಿಂದ ಲಂಡನ್ ನಗರದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವ ಇರಾದೆ ಇದೆ. ಪ್ರತಿ ತಾಲೂಕಿನಲ್ಲಿ ಕೆಂಪೇಗೌಡರ ಕುರಿತಾದ ವಿಚಾರ ಸಂಕಿರಣಗಳು ನಡೆಬೇಕು ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿದ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಎನ್. ಬಾಲಕೃಷ್ಣ ಮಾತನಾಡಿ, ಇಡೀ ಜಗತ್ತಿನಲ್ಲೇ ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲ ರಂಗದಲ್ಲೂ ಬೆಂಗಳೂರು ಮಂಚೂಣಿಯಲ್ಲಿದೆ. ಇದಕ್ಕೆ ಕೆಂಪೇಗೌಡರ ಶ್ರಮ ಕಾರಣ ಎಂದರು.
ಆದಿಚುಂಚನಗರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘುಗೌಡ, ಮಾಜಿ ಸಚಿವ ಎ. ಮಂಜು, ಬಿಜೆಪಿ ಮುಖಂಡ ಎಚ್. ಯೋಗರಮೇಶ್, ಕಾಂಗ್ರೆಸ್ ಮುಖಂಡರಾದ ಎಂ.ಟಿ. ಕೃಷ್ಣೇಗೌಡ, ಡಾ. ದಿನೇಶ್ ಭೈರೇಗೌಡ, ಜೆಡಿಎಸ್ ಮುಖಂಡರಾದ ಮುದ್ದನಹಳ್ಳಿ ರಮೇಶ್, ಮಲ್ಲಿತಮ್ಮನಹಳ್ಳಿ ರಮೇಶ್‌ಗೌಡ, ನಿವೃತ್ತ ಅಧಿಕಾರಿ ಬಿ.ಟಿ. ಜವರೇಗೌಡ, ಆರ್.ಕೆ. ರಾಜೇಗೌಡ, ಜಿಪಂ ಮಾಜಿ ಅಧ್ಯಕ್ಷೆ ಭಾಗ್ಯ ಗೋವಿಂದೇಗೌಡ, ಎಚ್.ಎಸ್. ಶಂಕರ್, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್. ಯೋಗೇಶ್, ಮರೀಗೌಡ, ಮಂಜುಶೆಟ್ಟಿಗೌಡ, ಹಾರಂಗಿ ಮಹಾ ಮಂಡಲ ಅಧ್ಯಕ್ಷ ಎಸ್.ಸಿ. ಚೌಡೇಗೌಡ ಇತರರು ಇದ್ದರು.
ಸಮಾಜ ಸೇವಕ ಹಾಗೂ ಅದಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಸಿಂಗನಕುಪ್ಪೆ, ನಿವೃತ್ತ ಯೋಧರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
- ರವಿ
0 Comments