ಅರಕಲಗೂಡು: ತಾಲೂಕಿನಲ್ಲಿ ವ್ಯಾಪಕ ಮಳೆಯಾದ ಪರಿಣಾಮ ಭಾರಿ ಪ್ರಮಾಣದಲ್ಲಿ ವಾಸದ ಮನೆಗಳ ಗೋಡೆಗಳು ಕುಸಿದು ಮತ್ತೊಂದೆಡೆ ಬಿತ್ತಿದ ಬೆಳೆ ಕಳೆದುಕೊಂಡು ಜನರ ಬದುಕು ಬೀದಿಗೆ ಬಿದ್ದಿದೆ. ಸರ್ಕಾರ ತಕ್ಷಣ ಸೂಕ್ತ ಪರಿಹಾರ ಒದಗಿಸಿ ನೋಂದವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ಆಗ್ರಹಿಸಿದರು.
ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಹಾಯ ಧನ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡು ಭಾಗಕ್ಕೆ ಹೊಂದಿಕೊಂಡಿರುವ ಕಾರಣ ತಾಲೂಕಿನಾದ್ಯಂತ ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಹೊಡೆತಕ್ಕೆ ಜನತೆ ರೋಸಿ ಹೋಗಿದ್ದಾರೆ. ಹಲವಾರು ಕಡೆ ಮನೆ ಮಠ ಕಳೆದುಕೊಂಡು ಬದುಕು ಸಾಗಿಸುವುದು ಕಷ್ಟಕರವಾಗಿದೆ. ಶೀಘ್ರವಾಗಿ ಪರಿಹಾರ ವಿತರಿಸಿ ಅಗತ್ಯ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಹೊಗೆಸೊಪ್ಪು, ಆಲೂಗೆಡ್ಡೆ, ಜೋಳದ ಬೆಳೆಗಳು ಅತಿಯಾದ ಮಳೆಗೆ ನಾಶವಾಗಿವೆ. ಕಾವೇರಿ ನದಿ ಪಾತ್ರದಲ್ಲಿ ತೋಟದ ಬೆಳಗಳು ಹಾಗೂ ಕೃಷಿ ಜಮೀನು ಒಂದು ತಿಂಗಳಿನಿAದ ಜಲಾವೃತಗೊಂಡು ರೈತರು ಕಣ್ಣೀರಿಡುತ್ತಿದ್ದಾರೆ. ಆಲಸಂದೆ, ಉದ್ದು, ಹೆಸರು, ಶೆಂಗಾ ಫಸಲು ನೀರಿನಲ್ಲಿ ಕೊಳೆತು ನಾಶವಾಗಿದೆ. ಅಪಾರ ಸಾಲ ಮಾಡಿ ಬೆಳೆಗಳನ್ನು ಕಳೆದುಕೊಂಡು ಚಿಂತಾಜಕನ ಸ್ಥಿತಿಯಲ್ಲಿ ರೈತರಿದ್ದಾರೆ. ಸರ್ಕಾರ ಮಾತ್ರ ಇದುವರೆಗೂ ಬಿಡಿಗಾಸು ನೆರವು ನೀಡಿಲ್ಲ. ಅನ್ನದಾತರ ಮೇಲೆ ಅಸಡ್ಡೆ ತೋರಲಾಗುತ್ತಿದೆ.
ಕ್ಷೇತ್ರದ ಜನಪ್ರತಿನಿಧಿಗಳು ರೈತರ ನೆರವಿಗೆ ಬರುತ್ತಿಲ್ಲ. ಸಂಕಷ್ಟದಲ್ಲಿ ಮುಳುಗಿರುವ ಅನ್ನದಾತರಿಗೆ ಸರ್ಕಾರ ತುರ್ತಾಗಿ ಬೆಳೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ವಕೀಲರಾದ ಬಿ.ಟಿ. ಚಂದ್ರಶೇಖರ್, ಹೇಮಂತಕುಮಾರ್, ಮುಖಂಡರಾದ ಕೆ.ಕೆ. ನಾಗರಾಜ್, ರವೀಂದ್ರ, ಉದಯ್, ಕಟ್ಟೇಪುರ ವೆಂಕಟೇಶ್, ಬಿಳಗೂಲಿ ರಾಮೇಗೌಡ ಇತರರಿದ್ದರು.
0 Comments