ಅರಕಲಗೂಡು : ಜನತೆಯ ಹಿತವನ್ನು ಆಧರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಮಾಢಿದ್ದು ಇದರ ವಿರುದ್ದ ಅಪಸ್ವರ ಎತ್ತಲು ವಿರೋಧ ಪಕ್ಷಗಳಿಗೆ ಯಾವುದೇ ನೈತಿಕ ಶಕ್ತಿ ಇಲ್ಲಎಂದು ಬಿಜೆಪಿ ಮುಖಂಡ ಯೋಗಾರಮೇಶ್ ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದರೆ 130 ಶಾಸಕರ ಸಂಖ್ಯೆಯನ್ನು 72ಕ್ಕೆ ಇಳಿಸಿ ಏಕೆ ಮನೆಗೆ ಕಳಿಸುತ್ತಿದ್ದರು. ಕಾಂಗ್ರೆಸ್ ಗೆ ನೀರಾವರಿ ಯೋಜನೆಗಳ ಕುರಿತು ಯಾವತ್ತೂ ಕಾಳಜಿ ಇರಲಿಲ್ಲ. ಮತ್ತೆ ಅಧಿಕಾರಕ್ಕೆ ಬರಲು ಕನಸು ಕಾಣುತ್ತಿರುವ ಕಾಂಗ್ರೆಸ್ ಮುಖಂಡರು ಜನರ ಕಣ್ಣಿಗೆ ಮಣ್ಣೆರಚಲು ಹಾಗೂ ತಮ್ಮ ಪಕ್ಷದ ಆಂತರಿಕ ಕಲಹವನ್ನು ಮುಚ್ಚಿಕೊಳ್ಳಲು ಮೇಕೆದಾಟು ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ತೆರಿಗೆಗಳನ್ನು ಹೇರಿ ಹೊಸ ಯೋಜನೆಗಳನ್ನು ಘೋಶಿಸುವುದೇ ಬಜೆಟ್ ಅಲ್ಲ. ರಾಜ್ಯದ ಅಭಿವೃದ್ಧಿಗೆ ಸಂಪನ್ಮೂಲಗಳ ಹಂಚಿಕೆ ಮಾಡುವ ಮೂಲಕ ಬೊಮ್ಮಾಯಿ ಉತ್ತಮ ಕೆಲಸ ನಡೆಸಿದ್ದಾರೆ. ನೀರಾವರಿ, ಮಹಿಳಾ ಸಬಲೀಕರೆಣ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿರುವುದು ಸ್ವಾಗತಾರ್ಹವಾಗಿದೆ. ಕೇವಲ ವಿರೋಧಕ್ಕಾಗಿ ಬಜೆಟ್ ಕುರಿತು ಅಪಸ್ವರ ಎತ್ತುವುದು ತರವಲ್ಲ. ಕಾಂಗ್ರೆಸ್ ವಿರೋಧ ಪಕ್ಷವಾಗಿ ಉತ್ತಮ ಸಲಹೆಗಳನ್ನು ನೀಡಲು ಮುಂದಾಗಲಿ ಎಂದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ್, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೇಶವೇಗೌಡ, ತಾಲ್ಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ, ಮುಖಂಡ ಶಿವಲಿಂಗ ಶಾಸ್ತ್ರಿ ಇದ್ದರು.
0 Comments