ಕೊಣನೂರು: ಪುರಾಣ ಪ್ರಸಿದ್ಧ ಶ್ರೀ ಕೊಳಲು ಗೋಪಾಲಕೃಷ್ಣ ಸ್ವಾಮಿಯವರ ಬ್ರಹ್ಮ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ರಥೋತ್ಸವದ ಅಂಗವಾಗಿ ಶ್ರೀ ಕೊಳಲು ಗೋಪಾಲಕೃಷ್ಣ ದೇವಾಲಯದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ವಿವಿಧ ದಾರ್ಮಿಕ ಕೈಂಕರ್ಯಗಳು ಜರುಗಿದವು. ಸ್ವಾಮಿಯ ಮೂಲ ಮೂರ್ತಿಗೆ ವಿವಿಧ ಅಭಿಷೇಕಗಳು. ವಿಶ್ವಕ್ಷೇನ ಹೋಮ , ರುಕ್ಮಿಣಿ ಸತ್ಯಭಾಮಾ ಸಮೇತ ಶ್ರೀ ಕೃಷ್ಣ ಹೋಮ, ಶ್ರೀ ಸೂಕ್ತ ಹೋಮ, ಪುರುಷ ಸೂಕ್ತ ಹೋಮ, ಅಷಾಧಿಕ್ಪಾಲಕರ ಹೋಮ, ಅದಿತ್ಯ ನವಗ್ರಹ ಹೋಮಗಳನ್ನು ಜರುಗಿದವು.
ನಂತರ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಬ್ರಹ್ಮ ರಥಕ್ಕೆ ರಥಸಂಪ್ರೋಕ್ಷಣೆ ಪೂರೈಸಿ ಥಾರೋಹಣ ಮಾಡಿಸಲಾಯಿತು. ಕಂದಾಯ ನಿರೀಕ್ಷಕ ಮಂಜುನಾಥ್ ಪೂಜೆ ಸಲ್ಲಿಸಿದ ನಂತರ 12.15 ಕ್ಕೆ ಅಭಿಜಿತ್ ಲಗ್ನದಲ್ಲಿ ಭಕ್ತರು ರಥವೆಳೆದರು.
ರಥದ ಜೊತೆ ಸಾಗಿದ ಮಕ್ಕಳು ಭಜನೆಯು ಭಕ್ತರ ಮನಸೆಳೆಯಿತು. ರಥೋತ್ಸವದ ವೇಳೆ ವೀರಗಾಸೆ, ಡೊಳ್ಳುಕುಣಿತ, ಕೀಲುಕುದುರೆ ಮತ್ತು ಲಗೋರಿ ಗೊಂಬೆಗಳು ಉತ್ಸವದ ಮೆರಗನ್ನು ಹೆಚ್ಚಿಸಿದವು. ರಥಸಾಗಿದ ದಾರಿಯುದ್ದಕ್ಕೂ ಭಕ್ತರು ಕಲ್ಲುಸಕ್ಕರೆ, ಚಾಕೋಲೆಟ್ ಹಂಚಿದರು.
ರಥ ಮಾಳದಿಂದ ಹೊರಟ ರಥವು ಗಾಂಧಿ ಸರ್ಕಲ್‌ವರೆಗೆ ತೆರಳಿ ಮತ್ತೆ ಸ್ವಸ್ಥಾನ ಸೇರಿತು. ದೇವಾಲಯವನ್ನು ತಳಿರುತೋರಣಗಳು ಮತ್ತು ಫಲಪುಷ್ಪ ಸಿಂಗರಿದ್ದು ಪ್ರಮುಖ ಆಕರ್ಷಣೆಯಾಗಿತ್ತು, ಪಟ್ಟಣ ಮತ್ತು ಸುತ್ತಮುತ್ತಲಿನಿಂದ ಬಂದಿದ್ದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್, ಮಾಜಿ ಸಚಿವ ಎ.ಮಂಜು, ಕಾಂಗ್ರೆಸ್ ಮುಖಂಡ ದಿನೇಶ್ ಬೈರೇಗೌಡ, ಕೃಷ್ಣೇಗೌಡ, ಶ್ರೀಧರ್‌ಗೌಡ, ಜೆ ಡಿ ಎಸ್ ಮುಖಂಡ ಪುನೀತ್ ರಾಮಸ್ವಾಮಿ ದೇವರ ದರ್ಶನ ಪಡೆದರು.
0 Comments