ಅರಕಲಗೂಡು: ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನು ಕೈ ಟಿಕೆಟ್ ನಿರ್ಧಾರವಾಗಿಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಈ ಸಂಬಂಧ ಚರ್ಚೆ ಕೂಡ ನಡೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರುಹಿದ್ದಾರೆ.
ತಾಲೂಕಿನ ಕೇರಳಾಪುರ ಸಮೀಪದ ಹರದನಹಳ್ಳಿ ಗ್ರಾಮಕ್ಕೆ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಭೇಟಿ ನೀಡಿದ ವೇಳೆ ಅವರೊಂದಿಗೆ ತಮ್ಮ ಆಪ್ತರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಿದ್ದರು.
ಮೈಸೂರು ಮುಡಾ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಅವರು ಟಿಕೆಟ್ ಗಾಗಿ ಪ್ರಬಲ ಆಕಾಂಕ್ಷಿಯಾಗಿರುವುದಾಗಿ ಹೇಳಿದಾಗ ಉತ್ತರಿಸಿದ ಅವರು, ಕ್ಷೇತ್ರದಲ್ಲಿ ಹಲವಾರು ಆಕಾಂಕ್ಷಿಗಳಿದ್ದಾರೆ, ಹೈಕಮಾಂಡ್ ನಿರ್ಧಾರದಂತೆ ಟಿಕೆಟ್ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸಂಭ್ರಮದ ಸ್ವಾಗತ; ಅರಕಲಗೂಡು ತಾಲೂಕಿನ ಕೇರಳಾಪುರ ಸಮೀಪದ ಹರದನಹಳ್ಳಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಥಳೀಯರು ಸಂಭ್ರಮದಿಂದ ಸ್ವಾಗತಿಸಿದರು.
ತಂದ್ರೆಕೊಪ್ಪಲು ಗ್ರಾಮದಲ್ಲಿ ದೇವಸ್ಥಾನ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಹರದನಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯುವ ಮುಖಂಡ ವಿಜಯ್ ಕುಮಾರ್ ನೇತೃತ್ವದಲ್ಲಿ ಅಪಾರ ಕಾರ್ಯಕರ್ತರು ಜಯ ಘೋಷಣೆ ಹಾಕಿ ಹೂ ಮಳೆ ಸುರಿಸಿ ಅದ್ದೂರಿಯಾಗಿ ಬರಮಾಡಿಕೊಂಡರು.
ಯುವ ಮುಖಂಡ ವಿಜಯ ಕುಮಾರ್ ಮಾತನಾಡಿ, ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ತಮಗೆ ಟಿಕೆಟ್ ಕೊಡಿಸುವ ಸಂಬಂಧ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಯಿತು. ಈ ಕುರಿತು ಸಿದ್ದರಾಮಯ್ಯ ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಪಕ್ಷದ ಮೇಲೆ ನಂಬಿಕೆ ಇಟ್ಟು ಸಂಘಟನಾ ಕಾರ್ಯದಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದರು.
0 Comments