ಅರಕಲಗೂಡು: ಚಲನಚಿತ್ರ ರಂಗದಲ್ಲಿ ತೊಡಗಿಸಿಕೊಂಡು ಸಾಧನೆಯ ಉತ್ತುಂಗಕ್ಕೆರುತ್ತ ಸಾಮಾಜಿಕ ಸೇವೆಗಳಲ್ಲಿಯೂ ಅಭೂತಪೂರ್ವ ಯಶಸ್ಸು ಸಂಪಾದಿಸಿ ಆಗಿ ಹೋದ ನಾಯಕ ನಾಟ ಪುನೀತ್ ರಾಜಕುಮಾರ್ ಅವರ ಜೀವನದ ಸಾರ್ಥಕ್ಯಗಳು ಜಗತ್ತು ಇರುವ ತನಕ ಹಸಿರಾಗಿ ಉಳಿಯಲಿವೆ ಎಂದು ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ನುಡಿದರು.
ಪಟ್ಟಣದ ಶಿಕ್ಷಕರ ಭವನದ ಮುಂಭಾಗ ಡಾ. ರಾಜರತ್ನ ಬಳಗ ಹಾಗೂ ಎಸ್.ಜಿ. ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪುನೀತ ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಹಳಷ್ಟು ಚಿತ್ರನಟರಿಗೆ ಜೀವನದ ವಯಸ್ಸು ಕಳೆದ ಮೇಲೆ ಶ್ರೇಯಸ್ಸು ಬರುತ್ತದೆ. ಆದರೆ ಮಗುವಿನಿಂದ ತಾರುಣ್ಯದ ವರೆಗೂ ಚಲನಚಿತ್ರ ನಟನೆಯಲ್ಲಿ ಸೈ ಎನಿಸಿಕೊಂಡು ಮಧ್ಯಮ ವಯಸ್ಸಿನಲ್ಲೇ ಕ್ಷಣ ಮಾತ್ರದಲ್ಲಿ ಕಣ್ಮರೆಯಾದ ಪುನೀತ್ ರಾಜಕುಮಾರ್ ಅವರ ಸಾಧನೆ ಮೇರುಮಟ್ಟದ್ದಾಗಿದೆ. ಇವರ ಜನ್ಮ ದಿನದ ಪ್ರಯುಕ್ತ ನಾನಾ ಜನೋಪಕಾರಿ ಸೇವಾ ಕಾರ್ಯಗಳನ್ನು ಕೈಗೊಂಡಿರುವುದು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕಾರ್ಯಕ್ರಮವಾಗಿದೆ ಎಂದು ಕೊಂಡಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮಾತನಾಡಿ, ಪುನೀತ್ ರಾಜಕುಮಾರ್ ಅವರಿಂದ ಕಲಿಯಬೇಕಿರುವ ಸಾವಿರಾರು ಸಕಾರಾತ್ಮಕ ಅಂಶಗಳಿವೆ. ಇವುಗಳಲ್ಲಿ ಅವರ ಸರಳ ಜೀವನ, ನಗು ನಾವೆಲ್ಲ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿರುವ ಪ್ರಮುಖವಾದ ಎರಡು ಅಂಶಗಳು. ಇವುಗಳಿಂದ ಜೀವನದ ಜಂಜಾಟಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಎಸ್.ಜಿ. ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ, ಉತ್ತಮರಿಗೆ ಜನರ ಆಶೀರ್ವಾದವಿದ್ದರೆ ಸದೃಢ ಸಮಾಜ ನಿರ್ಮಾಣ ಸಾಧ್ಯ. ಅಂತೆಯೇ ಉತ್ತಮರನ್ನು ಜಗತ್ತು ಸದಾ ಸ್ಮರಿಸಲಿದೆ ಎನ್ನುವುದಕ್ಕೆ ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಸೇವಾ ಕಾರ್ಯಗಳು ತಾಜಾ ಉದಾರಹಣೆಯಾಗಿವೆ. ನಾವೆಲ್ಲ ಇವರ ಹಾದಿಯಲ್ಲಿ ಸಾಗಬೇಕಿದೆ ಎಂದು ತಿಳಿಸಿದರು.
ಸಾಹಿತಿ ಹೆದ್ದುರ್ಗ ನಂದಿನಿ ವಿಶ್ವನಾಥ್ ಉಪನ್ಯಾಸ ನೀಡಿದರು. ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನಂದಿನಿ, ಬಸವಾಪಟ್ಟಣ ತೋಂಟದಾರ್ಯ ಶ್ರೀ ಸ್ವತಂತ್ರ ಶಿವಯೋಗಿ ಸ್ವಾಮೀಜಿ, ಕ್ರೈಸ್ತ ಧರ್ಮಗುರು ಜಾನ್ ವಿ. ನಟರಾಜ್ ಆಶೀರ್ವಚನ ನೀಡಿದರು.
ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ತೇಜೂರು ಶ್ರೀ ಸಿದ್ದರಾಮೇಶ್ವರ ಮಠದ ಕಲ್ಯಾಣ ಸ್ವಾಮೀಜಿ, ಸಿಪಿಐ ಸತ್ಯನಾರಾಯಣ, ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ಪಪಂ ಅಧ್ಯಕ್ಷ ಅಬ್ದುಲ್ ಬಾಸಿದ್, ತಾಲೂಕು ಬ್ಲಾಕ್ ಅಧ್ಯಕ್ಷ ಪ್ರಸನ್ನಕುಮಾರ್, ರಾಜರತ್ನ ಬಳಗದ ಅಧ್ಯಕ್ಷ ಮೋಹನ್, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚರ್ಚ್ ಧರ್ಮಗುರು ಜಾನ್ ವಿ. ನಟರಾಜ್ ಅವರು ದೇಹದ ಪ್ರಮುಖ ಅಂಗಾAಗಳನ್ನು ದಾನ ಮಾಡುವುದಾಗಿ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಗೌಡ ಸಮ್ಮುಖದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ ಅವರಿಗೆ ಒಪ್ಪಿಗೆ ಪತ್ರ ನೀಡಿದರು. ಬಡ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಿಸಿದರು. ಜನತೆಗೆ ವಿವಿಧ ಗಿಡಗಳನ್ನು ವಿತರಿಸಲಾಯಿತು.
0 Comments