ಅರಕಲಗೂಡು: ಅಗಲಿದ ಚಿತ್ರನಟ ಪುನೀತ್ ರಾಜಕುಮಾರ್ ಜನ್ಮದಿನದ ನೆನಪಾರ್ಥವಾಗಿ ಪಟ್ಟಣದಲ್ಲಿ ಮಾ. 17ರಂದು ಪುನೀತ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಟಿ. ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ತಿಳಿಸಿದರು.
ಡಾ. ರಾಜರತ್ನ ಬಳಗ ಹಾಗೂ ಎಸ್.ಜಿ. ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಶಿಕ್ಷಕರ ಭವನದ ಎದುರು ನಡೆಯುವ ಕಾರ್ಯಕ್ರಮದಲ್ಲಿ ಸ್ವಯಂ ನೇತ್ರದಾನ ನೋಂದಣಿ, ಪರಿಸರ ಜಾಗೃತಿಗಾಗಿ ಗಿಡಗಳ ವಿತರಣೆ, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಕಾರ, ಬಿಪಿ ಮತ್ತು ಸಕ್ಕರೆ ಕಾಯಿಲೆ ಪರೀಕ್ಷೆ, ಕೋವಿಡ್ ಲಸಿಕಾ ಅಭಿಯಾನ, ಸ್ವಯಂ ರಕ್ತದಾನ, ಕಣ್ಣು ತಪಾಸಣೆ, ಅಗತ್ಯವಿರುವರಿಗೆ ಉಚಿತ ಕನ್ನಡಕ ವಿತರಣೆ, ರಕ್ತ ಗುಂಪು ಪರೀಕ್ಷೆ, ದಂತ ತಪಾಸಣೆ ನಡೆಸಲಾಗುವುದು. ತಜ್ಞ ವೈದ್ಯರ ತಂಡ ತಪಾಸಣೆಗೆ ಆಗಮಿಸಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಪುನೀತ್ ರಾಜಕುಮಾರ್ ಕೇವಲ ನಟರಷ್ಟೆ ಅಲ್ಲದೆ ಮಾನವೀಯ ಮೌಲ್ಯಗಳ ರಾಯಭಾರಿಯಾಗಿದ್ದು ನೋಂದವರು ಮತ್ತು ಅಸಹಾಯಕರಿಗೆ ಉಪಕಾರಿಯಾಗುವ ನಿಟ್ಟಿನಲ್ಲಿ ಜನಪರ ಕಾರ್ಯಗಳನ್ನು ಕೈಗೊಂಡು ಕರುನಾಡಿಗೆ ಮಾರ್ಗದರ್ಶಕ ಜೀವಿಯಾಗಿದ್ದರು. ಇವರ ಉನ್ನತ ಸೇವಾ ಕಾರ್ಯಗಳನ್ನು ಮನಗಂಡು ಕಾರ್ಯಕ್ರಮ ನಡೆಯುವ ದಿನ ಬೆಳಗ್ಗೆ ಪಟ್ಟಣದ ವೃದ್ಧಾಶ್ರಮಕ್ಕೆ ತೆರಳಿ ವೃದ್ಧರಿಗೆ ಹೊದಿಕೆಗಳನ್ನು ವಿತರಿಸಲಾಗುವುದು.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಸಾನಿಧ್ಯ ವಹಿಸುವರು. ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರಿಗೂ ಅನ್ನ ಸಂತರ್ಪಣೆ ನಡೆಲಾಗುವುದು. ಕಾರ್ಯಕ್ರಮದ ಪೂರ್ಣ ಯಶಸ್ವಿಗೆ ಸಹಕರಿಸಿ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಡಾ. ರಾಜ್ ಬಳಗದ ಅಧ್ಯಕ್ಷ ಮೋಹನ್, ದಯಾನಂದ, ಭೀಮರಾಜ್, ಆಟೋ ಧರ್ಮ, ವಿಜಯಕುಮಾರ್, ಮಂಜು, ಸಲೀಂ, ಜಿಪಂ ಮಾಜಿ ಸದಸ್ಯ ಶ್ರೀನಿವಾಸ್ ಗೋಷ್ಢಿಯಲ್ಲಿದ್ದರು.
0 Comments