ರೈತರ ಹೋರಾಟ ಬೆಂಬಲಿಸಿದ ಕೃಷ್ಣೇಗೌಡ; ರಾಗಿ ಚೀಲಗಳನ್ನಿಟ್ಟು ಪ್ರತಿಭಟನೆ

ಅರಕಲಗೂಡು: ರಾಗಿ ಖರೀದಿ ನೋಂದಣಿ ಸ್ಥಗಿತಗೊಳಿಸಿ ರೈತರ ಹಿತವನ್ನು ಸರ್ಕಾರ ನಿರ್ಲಕ್ಷ್ಯಿಸಿದೆ. ರೈತ ವಿರೋಧಿ ನೀತಿಗಳನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು. ರೈತರ ಉಪೇಕ್ಷೆ ಸಲ್ಲದು ಉದ್ಯಮಿ ಎಂ.ಟಿ. ಕೃಷ್ಣೇಗೌಡ ಎಂದು ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿರುವ ಕ್ರಮವನ್ನ ಖಂಡಿಸಿ  ತಾಲೂಕು ರೈತ ಸಂಘದ ಕಾರ್ಯಕರ್ತರು  ತಾಲೂಕು ಕಚೇರಿ ಮುಂದೆ ರಾಗಿ ತುಂಬಿದ ಚೀಲಗಳನ್ನು ಇಟ್ಟುಕೊಂಡು ನಡೆಸಿದ ಪ್ರತಿಭಟನೆ ಬೆಂಬಲಿಸಿ  ಮಾತನಾಡಿದ ಅವರು,

ಹಳೇ ಮೈಸೂರು ಭಾಗದ ರೈತರು ಜೀವನಕ್ಕಾಗಿ ರಾಗಿ ಬೆಳೆಯನ್ನೆ ಹೆಚ್ಚಾಗಿ ಅವಲಂಬಿಸಿದ್ದಾರೆ. ಈ ಬಾರಿ ಅತಿವೃಷ್ಠಿ ಹೊಡೆತಕ್ಕೆ ಸಿಲುಕಿ ಅಪಾರ ಪ್ರಮಾಣದ ರಾಗಿ ಫಸಲು ಹುಲ್ಲು ಸಮೇತ ನೆಲಕಚ್ಚಿತು. ಖುದ್ದು ಕಂದಾಯ ಸಚಿವ ಆರ್.‌ಅಶೋಕ್ ತಾಲೂಕಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದರೆ ಇಂದಿಗೂ ಹೆಚ್ಚಿನ ರೈತರಿಗೆ ಸೂಕ್ತ ಪರಿಹಾರ ದೊರೆತಿಲ್ಲ. ಕೆಲವೇ ರೈತರಿಗೆ ಬಿಡಿಗಾಸು ನೀಡಲಾಗಿದೆ. ಇದೀಗ ಬೆಂಬಲ ಬೆಲೆಯಡಿ ರಾಗಿ ಖರೀದಿಸುವುದನ್ನು ಸ್ಥಗಿತಗೊಳಿಸಿ ಅನ್ನದಾತರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ.‌ ಸರ್ಕಾರ ರಾಗಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಬೇಕು ಎಂದು‌ ಒತ್ತಾಯಿಸಿದರು.
 
ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ, ಮುಖಂಡರಾದ ಮುಗಳೂರು ಕೃಷ್ಣೇಗೌಡ, ಹೊಂಬೇಗೌಡ, ರವಿ, ಶಿವಣ್ಣ, ಜಗದೀಶ್ ಇನ್ನೂ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Post a Comment

0 Comments