ಅರಕಲಗೂಡು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ತುಂಬಿರುವ ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಿ ಜನಪರವಾದ ಸ್ವಚ್ಚ ಆಡಳಿತ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಉದಯಿಸಿದ್ದು ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ತಿಳಿಸಿದರು.
ಪಟ್ಟಣದ ಅನಕೃ ವೃತ್ತದಲ್ಲಿ ಕೆಆರ್‌ಎಸ್ ಪಕ್ಷದ ತಾಲೂಕು ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ.
ಅಧಿಕವಾಗಿ ಮದ್ಯದ ಅಂಗಡಿಗಳನ್ನು ತೆರೆದು ಗ್ರಾಮೀಣ ಭಾಗದಲ್ಲಿ ಜನತೆ ಬಡತದ ಜೀವನ ಸಾಗಿಸುವಂತಾಗಿದೆ. ರಾಜ್ಯದಲ್ಲಿ ಅಧಿಕಾರ ನಡೆಸಿದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂಬ ಜೆಸಿಬಿ ಪಕ್ಷಗಳು ಭ್ರಷ್ಟ ಆಡಳಿತಕ್ಕೆ ಕುಮ್ಮಕ್ಕು ನೀಡಿದ್ದು ರಾಜ್ಯದ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ.
ವೈಯಕ್ತಿಕ ರಾಜಕಾರಣಕ್ಕೆ ಬಳಸಿಕೊಂಡು ಅಭಿವೃದ್ಧಿ ಕಾಣುತ್ತಿದ್ದಾರೆ ಹೊರತು ಜನಸಾಮಾನ್ಯರ ಏಳಿಗೆ ಇಲ್ಲವಾಗಿದೆ. ರಾಜ್ಯದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಿ ಕೆಆರ್‌ಎಸ್ ಪಕ್ಷ ಸಂಘಟಿತ ಹೋರಾಟ ನಡೆಸುತ್ತಿದೆ. ಮುಂಬರುವ ವಿಧಾನ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಜಿಪಂ ಮತ್ತು ತಾಪಂ ಚುನಾವಣೆಗೆ ಆಕಾಂಕ್ಷಿಗಳನ್ನು ಗುರುತಿಸಲಾಗುತ್ತಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಅರಕಲಗೂಡು ಕ್ಷೇತ್ರದಿಂದ ಕೇಶವಮೂರ್ತಿ, ಹೊಳೆನರಸೀಪುರ ಕ್ಷೇತ್ರದಿಂದ ಸತೀಶ್ ಗೌಡ ಮಳಲಿ, ಹಾಸನ ಕ್ಷೇತ್ರದಿಂದ ಬೂವನಹಳ್ಳಿ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದ್ದು ಎಲ್ಲೆಡೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಪಕ್ಷದಿಂದ ಜನಪರವಾದ 13 ಅಂಶಗಳ ಕಿರು ಪ್ರಣಾಳಿಕೆ ಬಿಡುಗಡೆ ಮಾಡಲಾಡುವುದು ಎಂದರು.
ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಕೇಶವಮೂರ್ತಿ, ಮುಖಂಡರಾದ ಸೋಮಸುಂದರ್, ಗುರುಮೂರ್ತಿ, ಡಿ.ಎಚ್. ಪ್ರಕಾಶ್, ಹರಳಹಳ್ಳಿ ತಮ್ಮೇಗೌಡ, ಕೃಷ್ಣೇಗೌಡ, ಪ್ರೇಮಕುಮಾರ್, ಬಸವರಾಜ್, ಪ್ರಭಾಕರ್ ಇತರರಿದ್ದರು. ಅನಕೃ ವೃತ್ತದ ಬಳಿ ಲಂಚಮುಕ್ಕಾಗಿ ಕೆಆರ್‌ಎಸ್ ಪಕ್ಷ ಬೆಂಬಲಿಸಿ ಭ್ರಷ್ಟ ರಾಜಕಾರಣಿಗಳನ್ನು ಹೊರಗಿಡಬೇಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಮೆರವಣಿಗೆ ಸಾಗಿದರು.
0 Comments