ಅರಕಲಗೂಡು: ಅಂಗವಿಕಲರು ಮತ್ತು ಬಡ ವರ್ಗದ ಫಲಾನುಭವಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ತಾಲೂಕು ಆಡಳಿತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.
ತಾಲೂಕಿನ ದೊಡ್ಡಮಗ್ಗೆ ಬಿಜಿಎಸ್ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಸಹಾಯಕರು, ಅಂಗವಿಕಲರು ಹಾಗೂ ಶೋಷಣೆಗೆ ಒಳಗಾದ ಜನರು ಸರ್ಕಾರದ ಸವಲತ್ತಿನ ಅರಿವಿಲ್ಲದೆ ಕಚೇರಿಗಳಿಗೆ ಬರಲು ಕಷ್ಟಕರವಾಗಿದೆ. ಇದರಿಂದಾಗಿ ಅನೇಕರು ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ.
ಇದನ್ನು ಮನಗಂಡು ತಾಲೂಕು ಆಡಳಿತ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳ ಮನೆಗೆ ಬಾಗಿಲಿಗೆ ತಲುಪಿಸಿ ಸಂಕಷ್ಟದಲ್ಲಿರುವ ಜನರ ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ ಎಂದರು.
ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್ ಮಾತನಾಡಿ, ಹೋಬಳಿ ಕೇಂದ್ರಗಳಲ್ಲಿ ನಡೆಸುತ್ತಿರುವ ಕಂದಾಯ ಮತ್ತು ಪಿಂಚಣಿ ಅದಲಾತ್ ಕಾರ್ಯಕ್ರಮಗ ಸದುಪಯೋಗ ಹೊಂದಲು ಜನತೆ ಮುಂದಾಗಬೇಕು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.
ರಾಜಸ್ವ ನಿರೀಕ್ಷಕ ರಾಘವೇಂದ್ರ, ಉಪ ತಹಸೀಲ್ದಾರ್ ರವಿ, ಬೆಳವಾಡಿ ಗ್ರಾಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಅಶೋಕ, ಸದಸ್ಯ ಕೃಷ್ಣ, ಮಹೇಶ್, ಅಕ್ಷರ ದಾಸೋಹ ಅಧಿಕಾರಿ ಶಿವಕುಮಾರ್, ಹೇಮಾವತಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೇಶವಮೂರ್ತಿ, ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ. ಯೋಗಣ್ಣ, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.
ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯದ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು. ಸಾರ್ವಜನಿಕರಿಂದ ಮನವಿ ಸ್ವೀಕರಿಸಲಾಯಿತು.
0 Comments