ಕೈ ಹಿಡಿದ ಶ್ರೀಧರ್ ಗೌಡ ಜೆಡಿಎಸ್ ತೊರೆದ ಶ್ರೀನಿವಾಸ್: ಡಿ.ಕೆ. ‌ಸುರೇಶ್, ಧ್ರುವನಾರಾಯಣ್ ಸಮ್ಮುಖ

ಅರಕಲಗೂಡು: ಕ್ಷೇತ್ರದಲ್ಲಿ ಮತದಾರರ ವಿಶ್ವಾಸ ಹೆಚ್ಚು ಸಂಪಾದಿಸುವ ಆಕಾಂಕ್ಷಿಗಳಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಟಿಕೆಟ್ ನೀಡಲಿದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದಲ್ಲಿ ಲೋಕಾಯುಕ್ತ ವೃತ್ತ ನಿರೀಕ್ಷಕರ ಹುದ್ದಗೆ ಸ್ವಯಂ ರಾಜೀನಾಮೆ ಸಲ್ಲಿಸಿದ ಶ್ರೀಧರ್ ಗೌಡ ಮತ್ತು ಸಹೋದರ ಜೆಡಿಎಸ್ ನ ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಯುವಕರ ಅವಶ್ಯಕತೆ ಇದೆ. 

ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದಷ್ಟು ಪಕ್ಷ ಸದೃಢವಾಗುತ್ತದೆ. ಕ್ಷೇತ್ರದಲ್ಲಿ ಜನರ ಒಲವು ಯಾರ ಕಡೆ ಇದೆ ಎಂಬದನ್ನು ಸಮೀಕ್ಷೆ ಮಾಡಿ ಹೈಕಮಾಂಡ್ ಟಿಕೆಟ್ ನೀಡಲಿದೆ. ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ಅಧಿಕಾರಿಯಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿ ಇದೀಗ ಕ್ಷೇತ್ರದಲ್ಲಿ ಬಡವರ ಪರ ಕೆಲಸ ಮಾಡುವ ಉದ್ದೇಶದಿಂದ ಶ್ರೀಧರ್ ಗೌಡ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಕಾಂಗ್ರೆಸ್ ಸೇರಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಇವರು ಕಾರ್ಯನಿರ್ವಹಿಸುವ ಭರವಸೆ ಇದೆ ಎಂದು ಹೇಳಿದರು.

ಕೆಂಪುಕೋಟೆ ಮೇಲೆ ಕೆಸರಿ ಧ್ವಜ ಹಾರಿಸುವುದಾಗಿ ಹೇಳಿ ಪ್ರಚೋಧನಕಾರಿ ಹೇಳಿಕೆ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಸಂಸ್ಕೃತಿ, ಧರ್ಮದ ಕುರಿತು ಮಾತನಾಡುವ ಬಿಜೆಪಿಯವರು ಇವೆರಡನ್ನು ಉಳಿಸುವ ಕೆಲಸ ಮಾಡುತ್ತಿಲ್ಲ, ಇವರು ಸಂವಿಧಾನವನ್ನು ಉಳಿಸಲು. ಹೀಗಾಗಿ ಬಿಜೆಪಿ ನಿರ್ಮೂಲನೆ ಮಾಡಲು ರಾಷ್ಟ್ರದ ಜನತೆ ತೀರ್ಮಾನಿಸಿದ್ದಾರೆ.

ಡಿ.ಕೆ.ಶಿವಕುಮಾರ್ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದರೆ ಅದಕ್ಕೆಲ್ಲ ಹೆದರುವ ಜಾಯಮಾನ ನಮ್ಮದಲ್ಲ ಎಂದು ತಿರುಗೇಟು ನೀಡಿದರು.

ಆರ್. ಧ್ರುವನಾರಾಯಣ್ ಮಾತನಾಡಿ, ಜನಪ್ರಿಯ ಮುಖಂಡ ಶ್ರೀಧರ್ ಗೌಡ ಹಾಗೂ ಈ ಭಾಗದ ಜೆಡಿಎಸ್ ಪ್ರಭಾವಿ ಮುಖಂಡ ಶ್ರೀನಿವಾಸ್ ಅವರು ಅಪಾರ ಬೆಂಬಲಿಗರೊAದಿಗೆ ಕಾಂಗ್ರೆಸ್ ಸೇರಿದ್ದಾರೆ. ವಿಶೇಷವಾಗಿ ಬಡವರು, ರೈತರ ಸೇವೆ ಮಾಡುತ್ತಿರುವ ಇಬ್ಬರು ಸಹೋದರರು ಸಾಮಾಜಿಕ ನ್ಯಾಯ ನೀಡುತ್ತಿರುವ ಪಕ್ಷವಾದ ಕಾಂಗ್ರೆಸ್ ಸೇರಿದ್ದರಿಂದ ಕ್ಷೇತ್ರದಲ್ಲಿ ಪಕ್ಷಕ್ಕೆ ಆನೆ ಬಲ ಬಂದAತಾಗಿದೆ ಎಂದರು.
ಆರ್. ಧ್ರುವನಾರಾಯಣ್, ಡಿ.ಕೆ. ಸುರೇಶ್ ತಮ್ಮ ಮೊಬೈಲ್ ನಲ್ಲಿ ಶ್ರೀಧರ್ ಗೌಡ ಅವರ ಫೋಟೋ ಕ್ಲಿಕ್ಕಿಸಿ ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಮೂಲಕ ಇಬ್ಬರು ಸಹೋಧರರನ್ನು ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಕೆ. ಗೋಪಾಲಸ್ವಾಮಿ, ಕೆಪಿಸಿಸಿ ಸದಸ್ಯ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂತೋಷ್ ಶಣವಿನಕುಪ್ಪೆ, ಮುಖಂಡರಾದ ಕೃಷ್ಣೇಗೌಡ, ಶೇಷೇಗೌಡ ಇತರರಿದ್ದರು.

Post a Comment

0 Comments