ಅರಕಲಗೂಡು: ತಾಲೂಕಿನ ಶಿರಧನಹಳ್ಳಿ ಗ್ರಾಮದಲ್ಲಿ ಕೆಶಿಪ್ ಸಿಬ್ಬಂದಿ ಏಕಾಏಕಿ ಅಂಬೇಡ್ಕರ್ ನಾಮಫಲಕ ಕಿತ್ತು ಸಂವಿಧಾನಶಿಲ್ಪಿಗೆ ಅವಮಾನ ಎಸಗಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.
ಮಾಗಡಿ- ಸೋಮವಾರಪೇಟೆ ಮಾರ್ಗವಾಗಿ ಹಾದು ಹೋಗಿರುವ ಕೆಶಿಪ್ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಸಿಬ್ಬಂದಿ ಊರಿನ ರಸ್ತೆ ಬದಿಯಲ್ಲಿದ್ದ ಡಾ. ಅಂಬೇಡ್ಕರ್ ಫಲಕವನ್ನು ಗ್ರಾಮಸ್ಥರ ಗಮನಕ್ಕೂ ತರದೆ ಇಲ್ಲವೇ ಸಂಬAಧಪಟ್ಟ ಇಲಾಖೆಗೂ ತಿಳಿಸದೆ ಏಕಾಏಕಿ ಕಿತ್ತು ಪಕ್ಕದ ಮರದ ಕೊಂಬೆಗೆ ನೇತು ಹಾಕಿದ್ದಾರೆ ಎಂದು ಆರೋಪಿಸಿ ಯುವಕರು, ದಲಿತ ಸಂಘಟನೆಗಳ ಮುಖಂಡರು ದಿಢೀರ್ ಪ್ರತಿಭಟನೆ ಆರಂಭಿಸಿದರು.
ರಾಜಸ್ವ ನಿರೀಕ್ಷಕ ಸಿ. ಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಧರ್ಮೇಶ್, ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ಧಾವಿಸಿ ವಸ್ತುಸ್ಥಿತಿ ಅವಲೋಕಿಸಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಕೆಶಿಪ್ ಸಿಬ್ಬಂದಿ ಹಾಗೂ ಕಾಮಗಾರಿ ಸ್ಥಳದಲ್ಲಿದ್ದ ಗುತ್ತಿಗೆ ಮೇಲ್ವಿಚಾರಕ ರಾಜು ಅವರನ್ನು ಕರೆಸಿ ಅಂಬೇಡ್ಕರ್ ನಾಮಫಲಕ ಕಿತ್ತು ಹಾಕಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸೂಕ್ತ ಸ್ಥಳದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ತೀವ್ರಗೊಳಿಸಿದರು.
ಅಂಬೇಡ್ಕರ್ ಪುತ್ಥಳಿ ಸ್ಥಾಪಿಸುವುದಾಗಿ ಕೆಶಿಪ್ ಸಿಬ್ಬಂದಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
0 Comments