ಅಭಿವೃದ್ಧಿ ನಿರ್ಲಕ್ಷ್ಯಿಸಿದ ಡಬಲ್ ಇಂಜಿನ್ ಸರ್ಕಾರ: ನಲಪಾಡ್ ಲೇವಡಿ

ಅರಕಲಗೂಡು: ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ನಾಡಿನ ಅಭಿವೃದ್ಧಿ ಮಾತ್ರ ಸಂಪೂರ್ಣ ಕ್ಷೀಣಿಸಿದ್ದು, ಯುವಕರು ಉದ್ಯೋಗವಿಲ್ಲದೆ ಕೋಮು ಗಲಭೆಗಳ ದಳ್ಳುರಿಗೆ ಸಿಲುಕಿ ನರಳುವಂತಾಗಿದೆ ಎಂದು ಕೆಪಿಸಿಸಿ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ನಲಪಾಡ್ ಲೇವಡಿ ಮಾಡಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಎ. ಮಂಜು ಅಭಿಮಾನಿಗಳ ಬಳಗ ಹಾಗೂ ಡಾ. ಮಂಥರ್‌ಗೌಡ ಕ್ರಿಕೆಟ್ ಅಸೋಸಿಯೇಷನ್ ಸಹಯೋಗದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ದೇವರಹಟ್ಟಿ ಕಪ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 

ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ ನರೇಂದ್ರ ಮೋದಿ ನೀಡಿದ ಅಶ್ವಾಸನೆಗಳನ್ನು ಈಡೇರಿಸಲು ವಿಫಲವಾಗಿದ್ದಾರೆ. ಉದ್ಯೋಗವಿಲ್ಲದೆ ಯುವಕರು ದಾರಿ ತಪ್ಪಲು ಮೋದಿ ನೀಡಿದ ಹುಸಿ ಭರವಸೆಗಳೇ ಕಾರಣವಾಗಿದ್ದು, ಬದಲಿಗೆ ಜನರ ನಡುವೆ ಕೋಮು ದ್ವೇಷ ಬಿತ್ತಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನರು ರೋಸಿ ಹೋಗಿದ್ದಾರೆ. ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟ ಪಕ್ಷವನ್ನು ಜನತೆ ಬೆಂಬಲಿಸಬೇಕು. ಮೇಕೆದಾಟು ನೀರಾವರಿ ಯೋಜನೆ ಜಾರಿಗೆ ನಡೆದ ಪಾದಯಾತ್ರೆಗೆ ಸೇರಿದ ಜನಸಾಗರ ಕಂಡು ಬೆಚ್ಚಿದ ಬಿಜೆಪಿ ಸರ್ಕಾರ ಕೋವಿಡ್ ನೆಪವೊಡ್ಡಿ ಲಾಕ್‌ಡೌನ್ ವಿಧಿಸಿ ಅಡ್ಡಗಾಲು ಹಾಕಿತು. ಬಿಜೆಪಿ ಜನವಿರೋಧಿ ಧೋರಣೆಗೆ ಕಾಂಗ್ರೆಸ್ ಹೆದರುವುದಿಲ್ಲ. ನಮ್ಮ ನೀರು ನಮ್ಮ ಹಕ್ಕಾಗಿದ್ದು ಯೋಜನೆ ಅನುಷ್ಠಾನಗೊಳಿಸುವಂತೆ ಫೆ. 27ರಿಂದ ಮತ್ತೆ ಮೇಕೆದಾಟು ಪಾದಯಾತ್ರೆ ಮುಂದುವರಿಯಲಿದೆ. ಕಾರ್ಯಕರ್ತರು ಭಾಗಿಯಾಗಿ ಡಿ.ಕೆ. ಶಿವಕುಮಾರ್ ಅವರ ಬೆಂಬಲಕ್ಕೆ ನಿಂತು ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯ ಡಾ. ಮಂಥರ್‌ಗೌಡ ಮಾತನಾಡಿ, ನಟ ಪುನೀತ್ ರಾಜಕುಮಾರ್, ಮಲ್ಲಿಪಟ್ಟಣ ಪುನೀತ್ ಕೃಷ್ಣಮೂರ್ತಿ, ಎಗರ್‌ಗ್ರೀನ್ ಚಾರಿಟಬರ್ ಟ್ರಸ್ಟ್ ಅಧ್ಯಕ್ಷರಾಗಿದ್ದ ದಿ. ಪ್ರೇಮಕುಮಾರ್ ಅವರ ನೆನಪಾರ್ಥವಾಗಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್ ಅವರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಬಸವಾಸೆ ರಂಗಸ್ವಾಮಿ, ರಂಜಿತ್, ರವಿಕುಮಾರ್, ನಂದಕುಮಾರ್, ಹರೀಶ್, ಮಹೇಶ್, ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ಎವರ್ ಗ್ರೀನ್ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಸಂತೋಷ್, ಕೆಪಿಸಿಸಿ ಸದಸ್ಯ ಮಂಜುನಾಥ್ ಇತರರಿದ್ದರು. ಪಂದ್ಯಾವಳಿಯಲ್ಲಿ 16 ತಂಟಗಳು ಪಾಲ್ಗೊಂಡಿದ್ದವು.

Post a Comment

0 Comments