ಅರಕಲಗೂಡು: ತಾಲೂಕಿನ ಸಂತೆಮರೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ದೇಶೀಯ ಉಡುಗೆ ಮೇಳ ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ದೇಶಿಯ ಧಿರಿಸು ಸೀರೆ, ಪಂಚೆ ಧರಿಸಿ ಗಮನ ಸೆಳೆದರು.
ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಎ.ಟಿ. ರಾಮಸ್ವಾಮಿ ಅವರನ್ನು ದೇಶೀಯ ಉಡುಗೆ ತೊಟ್ಟು ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕರು, ಇಂದಿನ ಆಧುನಿಕತೆ ಸೋಗಿನಲ್ಲಿ ಕಣ್ಮರೆಯಾಗುತ್ತಿರುವ ನಮ್ಮ ದೇಶೀಯ ಸಂಸ್ಕೃತಿಯನ್ನು ಎಲ್ಲ ಹಂತದಲ್ಲೂ ಕಾಪಾಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ.
ಶಿಕ್ಷಣ ಬದುಕಿನ ಬುನಾದಿ ಇದ್ದಂತೆ. ಸರ್ಕಾರಿ ಶಾಲೆಗಳ ಶಿಕ್ಷಕರು ಬದ್ಧತೆಯಿಂದ ಕಾರ್ಯ ನಿರ್ವಹಿಸಿದರೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಜನಸಾಮಾನ್ಯರಲ್ಲಿ ಸರ್ಕಾರಿ ಶಾಲೆಗಳ ಕುರಿತು ವಿಶ್ವಾಸ ಹೆಚ್ಚಿಸಲು ಸಾಧ್ಯ ಎಂದು ತಿಳಿಸಿದರು.
ಶಾಲಾ ವತಿಯಿಂದ ಹೊರತಂದಿರುವ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ, ಸರ್ಕಾರಿ ಶಾಲೆ ತನ್ನ ಹೆಸರಿನಲ್ಲಿ ಕ್ಯಾಲೆಂಡರ್ ಹೊರತರುತ್ತಿರುವುದು ಸಂತಸದ ಸಂಗತಿ. ಈ ಶಾಲೆಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಮಹತ್ಬ ನೀಡುತ್ತಿದ್ದು 300 ಶಾಲೆಗಳ ದುರಸ್ತಿಗೆ ಹಣ ಒದಗಿಸಿರುವುದಾಗಿ ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಧನಂಜಯ ಮಾತನಾಡಿ, ಶಾಲೆಯಲ್ಲಿ 165 ಮಕ್ಕಳು ಕಲಿಯುತ್ತಿದ್ದು ಇವರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. ಕೊಠಡಿಗಳು, ಶಿಕ್ಷಕರು, ಶೌಚಗೃಹ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರೆತೆ ಇದೆ. ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಕೋರಿ ಶಾಸಕರಿಗೆ ಮನವಿ ಸಲ್ಲಿಸಿದರು.
ವರ್ಗಾವಣೆ ಗೊಂಡ ಪ್ರಭಾರ ಮುಖ್ಯ ಶಿಕ್ಷಕಿ ನಸುಮನ್ ಅವರನ್ನು ಗೌರವಿಸಲಾಯಿತು. ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ಶಿಕ್ಷರಾದ ಗೋವಿಂದೇಗೌಡ, ತೋಯಜಾಕ್ಷಿ ಇತರರಿದ್ದರು.
0 Comments