ಅರಕಲಗೂಡು:  ಪಟ್ಟಣ‌ ಸೇರಿದಂತೆ ಕೊಣನೂರು, ರಾಮನಾಥಪುರ, ಬಸವಾಪಟ್ಟಣ, ಕೇರಳಾಪುರ, ಮಲ್ಲಿನಾಥಪುರ ಹಾಗೂ ತಾಲೂಕಿನಲ್ಲಿ ಗುರುವಾರ ಹನುಮ ಜಯಂತಿಯನ್ನು  ಸಂಭ್ರಮದಿಂದ  ಆಚರಿಸಲಾಯಿತು. ಆಂಜನೇಯನ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಯಿತು. 

ಕೋಟೆ ಬಾಗಿಲು ವಿರಾಂಜನೇಯ ಸ್ವಾಮಿ ದೇಗುಲದಲ್ಲಿ ಬೆಳಿಗ್ಗೆ ಮೂಲ ವಿಗ್ರಹಕ್ಕೆ ಪಂಚಾಮೃತ  ಅಭಿಷೇಕ ನಡೆಸಿ ವಿಶೇಷ  ಅಲಂಕಾರ ಮಾಡಲಾಗಿತ್ತು. ಪೂಜಾ ಕಾರ್ಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು. ರಾತ್ರಿ  ಪ್ರಮುಖ ಬೀದಿಗಳಲ್ಲಿ ಹನುಮಂತನ ಮೂರ್ತಿಯ  ಉತ್ಸವ ನಡೆಸಲಾಯಿತು.  ಅರ್ಚಕ ಹರಿಭಟ್  ಪೂಜಾಕಾರ್ಯಗಳನ್ನು ನಡೆಸಿದರು. 
ಪೇಟೆ ಶನಿದೇವರ ಆಂಜನೇಯ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಫಲ ಪಂಚಾಮೃತ ಅಭಿಷೇಕ, ನವಗ್ರಹ ಪೂಜೆ ಹಾಗೂ  ಗಣಪತಿ, ಶ್ರೀ ರಾಮ ತಾರಕ, ಆಂಜನೇಯ ಮೂಲ ಮಂತ್ರ ಹೋಮಗಳನ್ನು ನಡೆಸಿ ಪೂರ್ಣಾಹುತಿ ನೀಡಲಾಯಿತು.

ಬಳಿಕ ಮಹಾಮಂಗಳಾರತಿ  ಹಾಗೂ  ಪ್ರಸಾದ ವಿನಿಯೋಗ ನಡೆಯಿತು. ಈಶ್ವರಾಚಾರ್ ಮತ್ತು ತಂಡದವರು ಹೋಮ ಕಾರ್ಯ ಹಾಗೂ ಅರ್ಚಕರಾದ ಕೆ. ಶ್ರೀನಿವಾಸ್ ಮತ್ತು ರವಿಕುಮಾರ್ ಪೂಜಾಕಾರ್ಯಗಳನ್ನು ನಡೆಸಿದರು. ರಾತ್ರಿ  ಗೀತಮ್ಮ ಮತ್ತು ಸಂಗಡಿಗರಿಂದ ಸಾಮೂಹಿಕ ಭಜನೆ, ಪ್ರಸಾದ ವಿನಿಯೋಗ ನಡೆಯಿತು.