ಬೆಳವಾಡಿಯಲ್ಲಿ ಮೇಳೈಸಿದ ರೈತ ದಿನಾಚರಣೆ ಕಾರ್ಯಕ್ರಮಗಳ ವೈಶಿಷ್ಟತೆ; ರಾಸುಗಳ ಕಲವರ

ಅರಕಲಗೂಡು: ಬೆಳವಾಡಿಯಲ್ಲಿ ರೈತ ದಿನಾಚರಣೆ ಪ್ರಯುಕ್ತ ಹಲವಾರು ಉಪಯುಕ್ತವಾದ ಜನಪರ ಕಾರ್ಯಕ್ರಮಗಳ ಸುದ್ದು ಮೇಳೈಸಿತು. ಅಲ್ಲಿನ ಕೇಂದ್ರಬಿಂಧುವಾಗಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಎಂ.ಸಿ. ರಂಗಸ್ವಾಮಿ ಸಮಗ್ರ ಬೆಳೆ ಬೇಸಾಯ ಪದ್ದತಿ ಅಳವಡಿಸಿಕೊಂಡು ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ರೈತರು ಕೃಷಿಯನ್ನು ಲಾಭದಾಯಕವನ್ನಾಗಿಸಿಕೊಳ್ಳಲು ಶ್ರಮಿಸಬೇಕು ಎಂದು ಕರೆ ಇತ್ತರು. 

ಇದು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಗುರುವಾರ ರೈತರ ದಿನಾಚರಣೆ ಪ್ರಯುಕ್ತ ಕೃಷಿ ಪತ್ತಿನ ಸಹಕಾರ ಸಂಘ, ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್, ಹಾಲು ಉತ್ಪಾದಕರ ಸಹಕಾರ ಸಂಘ, ಗ್ರಾಮ ಪಂಚಾಯಿತಿ, ರೈತ ಸಂಘ ಹಾಗೂ ವಿವಿಧ ಸ್ವಸಹಾಯ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನುವಾರುಗಳ ಪ್ರದರ್ಶನ, ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಸಮಸ್ಯೆಗಳಿಗೆ ಪರಿಹಾರ ಒದಗಿಸಿ  ಅನ್ನದಾತರ ಶ್ರೇಯೋಭಿವೃದ್ಧಿಗೆ ಅಹರ್ನಿಶಿ ದುಡಿದ ಗಣ್ಯರನ್ನು ರೈತ ಸಮುದಾಯ ಹೇಗೆ ನೆನಪಿಸಿಕೊಳ್ಳುತ್ತದೆ ಎಂಬುದಕ್ಕೆ ಚೌದರಿ ಚರಣ್ ಸಿಂಗ್ ಸೇವೆಗಳು ಸದಾಕಾಲವೂ ಸ್ಮರಣೀಯ. ಇವರ ನೆನಪಾರ್ಥ ಆಚರಿಸುತ್ತಿರುವ ರೈತರ ದಿನಾಚರಣೆ ಇಲ್ಲಿ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.

ಕಂದಲಿ  ಕೆವಿಕೆ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಟಿ. ನಾಗರಾಜ್ ಮಾತನಾಡಿ, ಕೃಷಿಯಲ್ಲಿ ವೈಜ್ಞಾನಿಕ ಪದ್ದತಿ ಅನುಸರಿಸಿ ರಾಸಾಯನಿಕ ಬಳಕೆ ಪ್ರಮಾಣ ಕಡಿತಗೊಳಿಸಬೇಕು. ಪರಿಸರ ಸಮತೋಲನ ಕಾಪಾಡಬೇಕು ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ. ಯೋಗಣ್ಣ ಮಾತನಾಡಿ, ರೈತರಿಗೆ ಮಾರಕವಾದ ಕಾಯ್ದೆಗಳನ್ನು ರೂಪಿಸಿದ್ದ ಕೇಂದ್ರ ಸರ್ಕಾರ ವಿರೋಧದ ನಡುವೆ ಹಿಂಪಡೆಯಲು ಒಂದೂವರೆ ವರ್ಷ ಬೇಕಾಯಿತು.‌ ಶಾಸಕಾಂಗ ಮತ್ತು ಕಾರ್ಯಾಂಗ ರೈತ ಸಮುದಾಯವನ್ನು ನಿರ್ಲಕ್ಷ್ಯಿಸದೆ ಉಪಯುಕ್ತ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ನಿಂಗೇಗೌಡ ಮಾತನಾಡಿ, ಅತಿವೃಷ್ಟಿ, ಅನಾವೃಷ್ಠಿಗೆ ತುತ್ತಾಗಿ ಬೆಳೆ ಕಳೆದುಕೊಂಡು ನಷ್ಟಕ್ಕೀಡಾಗುವ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಸ್ಪಂದಿಸಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕೆ.‌ ಸತೀಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರೇಗೌಡ, ಇಪ್ಕೋ ಪ್ರಾದೇಶಿಕ ವ್ಯವಸ್ಥಾಪಕ ವಿನಯಕುಮಾರ್ ಮಾತನಾಡಿದರು. 
ಗ್ರಾಪಂ ಅಧ್ಯಕ್ಷೆ ಶಿವಮ್ಮ, ರಂಗಾಪುರ ಕಮಲಮ್ಮ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಕೃಷಿ ಅಧಿಕಾರಿ ಅಶ್ವಿನಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ದಿಲೀಪ್, ರಾಜಸ್ವ ನಿರೀಕ್ಷಕ ರಾಘವೇಂದ್ರ, ಕೆಆರ್ ಎಸ್ ಪಕ್ಷದ ಕೃಷ್ಣೇಗೌಡ, ಚಂದ್ರಶೇಖರ್, ರಾಜ್ಯ ಪ್ರಶಸ್ತಿ ಪುರಸ್ಕೃತ ಕೃಷಿಕ ಸಿ.ಎಂ. ನವೀನ್ ಕುಮಾರ್, ಬಸವರಾಜ್, ಬೊಮ್ಮೇಗೌಡ, ಅಶೋಕ್, ದಯಾಪರ ಮೂರ್ತಿ, ಡಾ. ಚಿರಂಜೀವಿ ಉಪಸ್ಥಿತರಿದ್ದರು.
ಜಾನಪದ ಪರಿಷತ್ ಅಧ್ಯಕ್ಷ ದೇವನಂದ ವರಪ್ರಸಾದ್ ತಂಡದವರು ರೈತಗೀತೆ ಹಾಡಿದರು. ವಿವಿಧ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು. ವಿವಿಧ ಸ್ವಸಹಾಯ ಸಂಘಗಳಿಗೆ 37 ಲಕ್ಷ ರೂ ಸಾಲದ ಚೆಕ್ ವಿತರಿಸಲಾಯಿತು.

 ಇದಕ್ಕೂ ಮುನ್ನ ಊರಿನ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು, ರೈತರು ನೆಗಿಲು ಹೊತ್ತು ಸಾಗಿ, ಕಲಾವಿದ ಉದ್ದೂರು ರವಿ ವೀರಗಾಸೆ ನೃತ್ಯ ಪ್ರದರ್ಶಿಸಿದರು.

Post a Comment

0 Comments