ಅರಕಲಗೂಡು: ತಾಲೂಕಿನ ಕೊಣನೂರಿನಲ್ಲಿ ಮತದಾರರ ಪಟ್ಟಿಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಗ್ರಾಪಂ ಚುನಾವಣೆ ಬಹಿಷ್ಕರಿಸಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ ಕೊನೆಯಾಗಲಿದೆ.
ಗ್ರಾಪಂ ಕಚೇರಿ ಎದುರು ಸ್ಥಳೀಯರು ಹಮ್ಮಿಕೊಂಡಿರುವ ಪ್ರತಿಭಟನೆಗೆ ಕಳೆದೈದು ದಿನಗಳಿಂದ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ವಾರ್ಡ್ವಾರು ಮತದಾರರ ಪಟ್ಟಿಯಲ್ಲಿದ್ದ ಕೆಲವರ ಹೆಸರು ಬೇರೊಂದು ವಾರ್ಡ್ ಮತಪಟ್ಟಿಗೆ ಸೇರಿಸಲಾಗಿದೆ. ಅಭ್ಯರ್ಥಿಗೆ ಅನುಗುಣವಾಗಿ ಮತದಾರರ ಹಂಚಿಕೆ ಮಾಡಿಲ್ಲ. ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಬಿಜೆಪಿ ಮುಖಂಡ ಎಚ್. ಯೋಗಾರಮೇಶ್ ಬೆಳಗ್ಗೆ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಮಧ್ಯಾಹ್ನದ ವೇಳೆಗೆ ಮಾಜಿ ಸಚಿವ ಎ. ಮಂಜು ಧರಣಿ ಕುಳಿತು ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೊರಗೆ ಎ. ಮಂಜು ಅವರು ಭಾಷಣೆ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಪಂಚಾಯಿತಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲು ಮುಂದಾದ ವೇಳೆ ಮತ್ತೊಬ್ಬ ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ನಿಮಾರ್ಣವಾಗಿತ್ತು. ಎ. ಮಂಜು ಮಧ್ಯಪ್ರವೇಶಿಸಿ ಮತದಾರರ ಪಟ್ಟಿಯಲ್ಲಿನ ಲೋಪ ದೋಷ ಸರಿಪಡಿಸುವ ತನಕ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸದೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಒಗ್ಗಟ್ಟಿನಿಂದ ನಡೆದುಕೊಳ್ಳುವಂತೆ ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸರಗೂರು ಗ್ರಾಪಂ ಮಾಜಿ ಅಧ್ಯಕ್ಷ ಗೋವಿಂದೇಗೌಡ ಮಾತನಾಡಿ, ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಹಲವಾರು ಲೋಪ-ದೋಷಗಳಿದ್ದು ಮತದಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಇವುಗಳನ್ನು ಸರಿಪಡಿಸದೆ ಅಧಿಕಾರದಲ್ಲಿರುವ ಜನಪ್ರತಿಧಿಗಳು ನಿರ್ಲಕ್ಷö್ಯ ವಹಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೊಣನೂರು ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ. 17 ಕಡೆಯ ದಿನವಾಗಿದ್ದು ಇದುವರೆಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ.
ಯೋಗಾ ರಮೇಶ್ ಮಾತನಾಡಿ, ಕೊಣನೂರು ಮತ್ತು ರಾಮನಾಥಪುರ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿ ಅಭಿವೃದ್ದಿಯನ್ನು ಮಾಡಲು ಶ್ರಮಿಸುವೆ ಎಂದರು.
ತಾಲ್ಲೂಕು ರೈತ ಸಂಘ ಘಟಕದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ, ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ರಾಘವೇಂದ್ರಗೌಡ, ಸಮಸಮಾಜ ನಿರ್ಮಾಣ ವೇದಿಕೆಯ ಅಧ್ಯಕ್ಷ ವಿನೋದ್, ಹಾರಂಗಿ ಮಹಾಮಂಡಳದ ಅಧ್ಯಕ್ಷ ಎಸ್.ಸಿ,ಚೌಡೇಗೌಡ, ಸರಗೂರು ದೊಡ್ಡೇಗೌಡ, ಕೆ.ಕೆ. ನಾಗರಾಜ್, ಸೂರ್ಯನಾರಾಯಣ, ತಾ.ಪಂ ಮಾಜಿ ಸದಸ್ಯ ಇಮ್ರಾನ್ ಮೊಕ್ತಾರ್, ಪ್ರಾ, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಎಸ್.ಕೆ ಕೃಷ್ಣ, ಸದಸ್ಯ, ಗ್ರಾ.ಪಂ ಮಾಜಿ ಸದಸ್ಯರು ಮತ್ತು ಸ್ಥಳೀಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
0 Comments