ಸರ್ಕಾರಿ ಆಸ್ತಿ ಉಳಿಸಿ: ಹೂವಣ್ಣ ಅಧ್ಯಕ್ಷತೆಯಲ್ಲಿ ಪಪಂ ಸದಸ್ಯರ ಸಹಮತ ನಿಲುವು

ಅರಕಲಗೂಡು: ಪಟ್ಟಣ ವ್ಯಾಪ್ತಿಯಲ್ಲಿ ಕೆಲವರು ಇ ಸ್ವತ್ತು ದಾಖಲಾತಿ ಪಡೆದು ಸರ್ಕಾರಿ ಆಸ್ತಿ ಕಬಳಿಸಿ ಪರಬಾರೆ ಮಾಡುತ್ತಿದ್ದು ಇಂಥ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಪಪಂ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಪಪಂ ಅಧ್ಯಕ್ಷ ಹೂವಣ್ಣ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಸದಸ್ಯರಾದ ರಶ್ಮಿ, ರಮೇಶ್ ವಾಟಾಳ್ ಮಾತನಾಡಿ, ಆರು ಮತ್ತು ಏಳನೇ ವಾರ್ಡ್ ನಲ್ಲಿ ಸರ್ಕಾರಿ ಆಸ್ತಿಯನ್ನು ಎಗ್ಗಿಲ್ಲದೆ ಕಬಳಿಸಲಾಗುತ್ತಿದೆ. ಪಂಚಾಯತಿ ವತಿಯಿಂದ ಇ ಸ್ವತ್ತು ದಾಖಲೆ ನೀಡುತ್ತಿರುವ ಕ್ರಮ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಧ್ಯಕ್ಷ ಹೂವಣ್ಣ ಮಾತನಾಡಿ, ಸರ್ಕಾರಿ ಜಾಗದ ಕುರಿತು ಮಾಹಿತಿ ಕೇಳಿದರೆ ಇದುವರೆಗೂ ಸಿಬ್ಬಂದಿ ಒದಗಿಸಿಲ್ಲ. ಎಂದರು. ಅಧ್ಯಕ್ಷರೆ ಈ ರೀತಿ ಅಸಹಾಯಕತೆ ವ್ಯಕ್ತಪಡಿಸಿ ಕೈಚೆಲ್ಲಿದರೆ ಸದಸ್ಯರು ಹಾಗೂ ಸಾಮಾನ್ಯರ ಪಾಡೇನು ಎಂದು ಸದಸ್ಯ ರಮೇಶ್ ವಾಟಾಳ್ ತೀವ್ರವಾಗಿ ಪ್ರತಿಕ್ರಿಯಿಸಿದರು.
ಅಧ್ಯಕ್ಷ ಹೂವಣ್ಣ ಮಾತನಾಡಿ, ಎಲ್ಲ ಸದಸ್ಯರು ಒಟ್ಟಾಗಿ ಕಾರ್ಯಾಚರಣೆ ನಡೆಸಿ ಸರ್ಕಾರಿ ಆಸ್ತಿ ಉಳಿಸಬೇಕಿದೆ ಎಂದರು. ಒತ್ತುವರಿ ತೆರವುಗೊಳಿಸಿದ ಜಾಗದಲ್ಲಿ ಹಾಲಿನ ಡೇರಿ ತೆರೆಯಲು ಅನುಮತಿ ನೀಡಬೇಕು. ವಾಣಿಜ್ಯ ಮಳಿಗೆಗಳಿಂದಲೂ ಪಂಚಾಯಿತಿಗೆ ನಷ್ಟವಾಗುತ್ತಿದೆ. ಪಟ್ಟಣದಲ್ಲಿ ಎರಡು ಹಾಫ್ ಕಾಮ್ಸ್ ಹಣ್ಣಿನ ಮಾರಾಟ ಮಳಿಗೆಗಳ ಬಾಡಿಗೆ ದರವನ್ನು ಏರಿಸಬೇಕು ಎಂದು ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು. ಹಾಫ್ ಕಾಮ್ಸ್ ಮಳಿಗೆಗಳ ಬಾಡಿಗೆಯನ್ನು 6 ಸಾವಿರ ರೂಗೆ ಏರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಕೋಟೆ ಕೊತ್ತಲು ಗಣಪತಿ ದೇವಸ್ಥಾನ ಪ್ರದೇಶ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಪಟ್ಟಣದ 15ನೇ ವಾರ್ಡ್ ಗೆ ಏನೊಂದು ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡಿಲ್ಲ. ನನಗೆ ಮತ ನೀಡಿದ ಜನರಿಂದ ದೂಷಣೆಗೆ ಒಳಗಾಗಬೇಕಿದೆ ಎಂದು ಸದಸ್ಯೆ ಶಾರದಾ ಪೃಥ್ವಿರಾಜ್ ಆರೋಪಿಸಿದರು. 16ನೇ ವಾರ್ಡ್ ಗೆ ಇಂಜಿನಿಯರ್ ಅವರನ್ನು ಕರೆದೊಯ್ದು ಆಗಬೇಕಾಗಿರುವ ಕಾಮಗಾರಿಗಳನ್ನು ತೋರಿಸಿ ಅಂದಾಜು ಪಟ್ಟಿ ತಯಾರಿಸಿದರೂ ಅನುಮೋದನೆ ನೀಡಿಲ್ಲ ಎಂದು ಇಂಜಿನಿಯರ್ ಜಗದೀಶ್ ವಿರುದ್ದ ಸದಸ್ಯ ಅನಿಕೇತನ್ ಏರುಧ್ವನಿಯಲ್ಲಿ ಹರಿಹಾಯ್ದರು.

14ನೇ ವಾರ್ಡ್ ನಲ್ಲಿಯೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಪಾರ್ಕ್ ನಿರ್ವಹಣೆ ಇಲ್ಲದೆ ದನ ಕರುಗಳು ಗೇಟ್ ಒಳಗೆ ನುಗ್ಗುತ್ತಿವೆ. ಪಾರ್ಕ್ಗೆ ಕಾವಲುಗಾರರನ್ನು ನಿಯೋಜಿಸಬೇಕು ಎಂದು ಸದಸ್ಯೆ ಅನುಷಾ ಆಗ್ರಹಿಸಿದರು.
ಸಭೆಯಲ್ಲಿ ಸ್ಥಳೀಯ ಯೋಜನಾ ಪ್ರಾಧಿಕಾರ ಕಚೇರಿಗೆ ಚುನಾಯಿತ ಸದಸ್ಯರನ್ನು ಆಯ್ಕೆ ಮಾಡುವ ಕುರಿತು ವಿಷಯ ಪ್ರಸ್ತಾಪಿಸಲಾಯಿತು. ಈ ವೇಳೆ ಸದಸ್ಯ ಅನುಷಾ ಎದ್ದುನಿಂತು ಎಲ್ಲ ಹುದ್ದೆಗಳಿಗೂ ಪುರುಷರನ್ನೆ ನೇಮಕ ಮಾಡಿಕೊಳ್ಳುವುದಾದರೆ ಮಹಿಳಾ ಸದಸ್ಯರನ್ನು ಜನರು ಆಯ್ಕೆ ಮಾಡಿ ಕಳುಹಿಸಿರುವುದು ಏಕೆ ಎಂದು ಪ್ರಶ್ನಿಸಿ ಅಸಮಧಾನ ಹೊರಹಾಕಿದರು.
ಸಭೆಯಲ್ಲಿ ಕೃಷ್ಣಯ್ಯ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷ ನಿಖಿಲ್ ಕುಮಾರ್ ವೈಯಕ್ತಿಕ ಕಾರಣಕ್ಕಾಗಿ ನಾನು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಈತನಕ ಸಹಕರಿಸಿದ ಎಲ್ಲರಿಗೂ ಧನ್ಯನವಾದ ಅರ್ಪಿಸುವುದಾಗಿ ತಿಳಿಸಿ ಮುಂದೆ ಆಯ್ಕೆಯಾಗುವ ಉಪಾಧ್ಯಕ್ಷರಿಗೂ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಪಟ್ಟಣದ ಎಲ್ಲ ವಾರ್ಡ್ ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಭೆ ಅನುಮೋದನೆ ನೀಡಿತು. ಸರ್ಕಾರದ ಅನುದಾನ 41 ಲಕ್ಷ ರೂ, ವರ್ಗ 1ರ ನಿಧಿ 53 ಲಕ್ಷ ರೂ, 15ನೇ ಹಣಕಾಸು ಯೋಜನೆ ನಿಧಿ 18 ಲಕ್ಷ ರೂ ಸೇರಿದಂತೆ 1 ಕೋಟಿ ರೂ ವಿಶೇಷ ನಿಧಿಗೆ ಶಾಸಕರರಿಂದ ಕೋರಲಾಗಿದೆ ಎಂದು ಅಧ್ಯಕ್ಷ ಹೂವಣ್ಣ ಸಭೆಗೆ ತಿಳಿಸಿದರು. 

ಐಟಂ- 1.
ಸಭೆ ಆರಂಭದಲೇ ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ವರ್ಗ 1 ನಿಧಿಯಲ್ಲಿ ಕೇವಲ 5 ಸಾವಿರ ರೂ ವೆಚ್ಚ ಮಾಡಲು ಮಾತ್ರ ಅವಕಾಶವಿದ್ದು ಇದನ್ನು ಕನಿಷ್ಟ 1 ಲಕ್ಷ ರೂ ಗೆ ಏರಿಕೆ ಮಾಡಬೇಕು. ಈ ಕುರಿತು ಸ್ಥಳೀಯ ಸಂಸ್ಥೆ ಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ಸರ್ಕಾರದ ಗಮನ ಸೆಳೆಯಬೇಕು. 5 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿ ನಡೆಸಬೇಕಾದರೆ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಇದರಿಂದ ಸಣ್ಣಪುಟ್ಟ ಅಭಿವೃದ್ಧಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲು ಸಾದ್ಯವಿಲ್ಲ ದಂತಾಗಿದೆ. ಆಶ್ರಯ ಯೋಜನೆ ಮನೆ ಮತ್ತು ನಿವೇಶನಗಳ ವಿತರಣೆ ಗೆ ಚುನಾಯಿತ ಸದಸ್ಯರಿಗೆ ಅವಕಾಶವಿಲ್ಲವಾಗಿದ್ದು ಇದನ್ನು ಸದಸ್ಯರಿಗೆ ನೀಡಲು ಕಾನೂನು ರೂಪಿಸಬೇಕು. ಸದಸ್ಯರಿಗೆ ತಿಂಗಳಿಗೆ 5 ಸಾವಿರ ರೂ ವೇತನ ನಿಗದಿಪಡಿಸಬೇಕು. ಈ ಕುರಿತು ಸಭೆಯಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಎಲ್ಲ ಸದಸ್ಯರೂ ಒಟ್ಟಾಗಿ ವಿಧಾನಸೌಧಕ್ಕೆ ತೆರಳಿ ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ತಂದು ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದು ಸದಸ್ಯ ಅನಿಕೇತನ್ ಧನಿಗೂಡಿಸಿದರು.
ಐಟಂ- 2.
ಸಭೆ ಮುಗಿಸಿ ಸದಸ್ಯರು ಹೊರಬರುತ್ತಿದ್ದಂತೆ 14ನೇ ವಾರ್ಡ್ ಸದಸ್ಯೆ ಅನುಷಾ ಅವರ ಪತ್ನಿ ಹರೀಶ್ ಹಾಗೂ 4ನೇ ವಾರ್ಡ್ ಸದಸ್ಯೆ ಲಕ್ಷ್ಮೀ ಅವರ ಪತಿ ಮಂಜುನಾಥ್ ಅವರು ತಮ್ಮ ಪತ್ನಿಯರಿಗೆ ಯಾವುದೇ ಸ್ಥಾನ ನೀಡುತ್ತಿಲ್ಲ ಎಂದು ಗದ್ದಲ ಶುರುಮಾಡಿ ಅಧ್ಯಕ್ಷ ಹೂವಣ್ಣ ಮತ್ತು ಮುಖ್ಯಾಧಿಕಾರಿ ಶಿವಕುಮಾರ್ ವಿರುದ್ದ ಮಾತಿನ ಚಕಮಕಿ ನಡೆಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಪುರುಷ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿದಂತೆ ಸ್ಥಳೀಯ ಯೋಜನಾ ಪ್ರಾಧಿಕಾರ ಕಚೇರಿಗೆ ಮಹಿಳಾ ಸದಸ್ಯರನ್ನು ಆಯ್ಕೆ ಮಾಡಲು ಏನಾಗಿದೆ. ಮುಂದಿನ ದಿನಗಳಲ್ಲಿ ನಮಗೂ ರಾಜಕೀಯ ನಡೆಸಲು ಗೊತ್ತಿದೆ ಎಂದು ಕೂಗಾಟ ನಡೆಸಿದರು.

Post a Comment

0 Comments