ಹಾಸನ ಪಿಯು ಕಾಲೇಜು ಸೈನ್ಸ್ ಎಕ್ಸ್ ಪೋ – 2021 ಕಾರ್ಯಕ್ರಮ: ವಿದ್ಯಾರ್ಥಿಗಳ ಕೌಶಲ್ಯ ಸಾಬೀತು

ಅರಕಲಗೂಡು: ಇಂದಿನ ಆಧುನಿಕ ಜಗತ್ತಿನ ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ಮಹತ್ವ ಅರಿತು ಮುನ್ನಡೆಬೇಕಿದೆ ಎಂದು ಸಂಪನ್ಮೂಲ ವ್ಯಕ್ತಿ ಪಾರ್ಥಸಾರಥಿ ಸಲಹೆ ನೀಡಿದರು.

ಪಟ್ಟಣದ ಹಾಸನ ಪಿಯು ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೈನ್ಸ್ ಎಕ್ಸ್ ಪೋ – 2021 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 30 ವಿಜ್ಞಾನ ಚಟುವಟಿಕೆಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಾಸನ ಪಿಯು ಕಾಲೇಜಿನ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿ, ಮಕ್ಕಳಲ್ಲಿ ಇಂದು ವೈಜ್ಞಾನಿಕ ಮನೋಭಾವನೆ ಬಿತ್ತಬೇಕಿದೆ. ಮುಖ್ಯವಾಗಿ ವಿಜ್ಞಾನದ ಕುತೂಹಲದ ಸಂಗತಿಗಳ ಬಗ್ಗೆ ಆಸಕ್ತಿ ಬೆಳೆಸುವ ಸಲುವಾಗಿ ತಾಲೂಕಿನ ಎಲ್ಲ ಪ್ರೌಢ ಶಾಲೆಗಳ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಚಟುವಟಿಕೆಗಳ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ತಿಳಿಸಿಕೊಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿಜ್ಞಾನ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. ನಿವೃತ್ತ ಪ್ರೌಢ ಶಾಲಾ ಶಿಕ್ಷಕ ಪಾರ್ಥಸಾರಥಿ ಅವರು ವಿಜ್ಞಾನ ಚಟುವಟಿಕೆಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡುವರು. ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಅರಿವು ಒದಗಿಸ ಬಯಸುವ ಶಾಲೆಗಳು ಇವರನ್ನು ತಮ್ಮ ಶಾಲೆಗೆ ಕರೆಸಿ ಕಾರ್ಯಕ್ರಮ ಆಯೋಜಿಸ ಬಹುದಾಗಿದೆ ಎಂದು ತಿಳಿಸಿದರು. 

ಸೈನ್ಸ್ ಎಕ್ಸಪೋ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದೆ. ಒಟ್ಟು 25 ಶಾಲೆಗಳ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ದೊರಕಿಸಿಕೊಡುವ ಉದ್ದೇಶವಿದೆ. ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. 
ಕಾಲೇಜಿನ ಪ್ರಾಂಶುಪಾಲ ನವೀನ್ ಪಿ. ಉಲಿವಾಲ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಕೃಷ್ಣಮೂರ್ತಿ, ಪ್ರಜ್ವಲ್, ಗೋಪಿನಾಥ್, ಸುನೀಲ್, ಮಧು, ನಂದೀಶ್, ಪಲ್ಲವಿ, ಹೇಮಾ, ಎಬಿಎಂ ಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸುಧೀರ್ ಇತರರಿದ್ದರು.

Post a Comment

0 Comments