ಕಾಂಗ್ರೆಸ್‌ ಬಿಜೆಪಿಗೆ ಪಕ್ಷಾಂತರಿ ಎ. ಮಂಜು ದ್ರೋಹ; ಮತದಾರರು ಎಚ್ಚೆತ್ತುಕೊಳ್ಳಬೇಕೆಂದ ಯೋಗಾ ರಮೇಶ್

ಅರಕಲಗೂಡು: ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ಮತ್ತು ಬಿಜೆಪಿಗೆ ದ್ರೋಹ ಬಗೆಯುತ್ತಿರುವ ಮಾಜಿ ಸಚಿವ ಎ. ಮಂಜು ಅಧಿಕಾರದ ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಿ ಇದೀಗ ಕಣ್ಣೀರು ಹಾಕುವ ನಾಟಕವಾಡಿ ಕ್ಷೇತ್ರದ ಮತದಾರರನ್ನು ವಂಚಿಸುವ ಕುತಂತ್ರ ನಡೆಸಿದ್ದಾರೆ ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್. ಯೋಗಾ ರಮೇಶ್ ಕಿಡಿಕಾರಿದರು.

ರಾಜಕೀಯವಾಗಿ ತೊಬ್ಬತ್ತರ ದಶಕದಿಂದಲೂ ಪಕ್ಷಾಂತರ ಮಾಡುತ್ತಿರುವ ಎ. ಮಂಜು ಅಧಿಕಾರ ನೀಡಿದ ಪಕ್ಷಕ್ಕೆ ಹಾಗೂ ಮತದಾರರಿಗೆ ಹಸಿ ಸುಳ್ಳು ಹೇಳಿ ಅನ್ಯಾಯದ ಹಾದಿಯಲ್ಲಿ ಸಾಗಿದ್ದಾರೆ. ಬಿಜೆಪಿಯಲ್ಲಿದ್ದ ದಿ. ಬಿ.ಬಿ. ಶಿವಪ್ಪ, ದಿ. ಕೆ.ಎಚ್. ಹನುಮೇಗೌಡ ಇನ್ನು ಹಲವಾರು ನಾಯಕರ ದಿಕ್ಕು ತಪ್ಪಿಸಿ ಪಕ್ಷಕ್ಕೆ ಅನ್ಯಾಯವೆಸಗಿದ್ದಾರೆ.  ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದು ಪಕ್ಷ ಒಡೆದರು. ಬಿಜೆಪಿ ತಡವಾಗಿಯಾದರೂ ಮಂಜು ನಡೆ ಅರಿತು ಶಿಸ್ತು ಕ್ರಮ ವಿಧಿಸಿರುವುದು ಸ್ವಾಗತಾರ್ಹ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದ ಮಂಜು ಅವರ ಆಡಳಿತ ವೈಖರಿಗೆ ಬೇಸತ್ತು ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ತಿರಸ್ಕರಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಗೆ ಮಗ್ಗಲು ಮುಳ್ಳಾದರು. ನನಗೆ ಸಚಿವ ಸ್ಥಾನ ಸಿಗಲು ಸಿದ್ದರಾಮಯ್ಯ ಕಾರಣವಲ್ಲ, ಈ ಸಂಗತಿ ನನಗೆ ಮಾತ್ರ ಗೊತ್ತು ಎಂದು ಕಳೆದ ಲೋಕಸಭಾ ಚುನಾಣೆ ವೇಳೆ ಬಿಜೆಪಿ ಸೇರಿ ಟೀಕಿಸಿ ನಿಷ್ಠಾವಂತರನ್ನು ಕಡೆಗಣಿಸಿದರು. ಕಾಂಗ್ರೆಸ್ ನಲ್ಲಿ ಅಧಿಕಾರ ಪಡೆದು ನಂತರ ಪಕ್ಷ ತೊರೆದು, ಮತ್ತೆ ಹಿಂಬಾಲಕರನ್ನು ಕಾಂಗ್ರೆಸ್‌ ನಾಯಕರ ಬಳಿ ಕಳುಹಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಗೋಗರೆಯುವ ದಯನೀಯ ಸ್ಥಿತಿಗೆ ತಲುಪಿದ್ದಾರೆ ಎಂದು ಛೇಡಿಸಿದರು.

ಎಚ್.ಡಿ. ರೇವಣ್ಣ ಅವರ ಕುಟುಂಬ ರಾಜಕಾರಣ ಕುರಿತು ಟೀಕಿಸುತ್ತಿದ್ದ ಮಂಜು ಈಗ ಮಗನನ್ನು ಕೊಡಗು ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸಿದ್ದಾರೆ. ಪಕ್ಷದ ತತ್ವ, ಸಿದ್ದಾಂತಗಳ ಮೇಲೆ ನಂಬಿಕೆ ಇಲ್ಲ. ನಾನು ಈಗ  ಬಿಜೆಪಿಯಲ್ಲೇ ಇರುವೆ ಎಂದು ಹೇಳಿಕೆ ನೀಡಿ ಕೊಡಗಿನಲ್ಲಿ ಮಗನ ಪರ ರಾಜಕೀಯ ನಡೆಸುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಬಿಜೆಪಿ ರಾತ್ರಿ ವೇಳೆ ಕೊಡಗು ಕಾಂಗ್ರೆಸ್ ನಲ್ಲಿ ಸಕ್ರೀಯವಾಗಿ ಮಗನ ರಕ್ಷಣೆ ಮಾಡುತ್ತಿದ್ದಾರೆ. ಮತದಾರರನ್ನು ಮರುಳು ಮಾಡುವುದನ್ನು ಎ. ಮಂಜು ನಿಲ್ಲಿಸಬೇಕು ಎಂದು ಚುಚ್ಚಿದರು.

ಪಕ್ಷವೊಡೆದು ಪಕ್ಷಾಂತರ ಮಾಡುವಲ್ಲಿ ನಂ ಒನ್ ಆಗಿರುವ ಮಂಜು ನಡೆ ಹಸಿ ಸುಳ್ಳು, ಕಾಂಗ್ರೆಸ್ ನಲ್ಲಿ ಮಗನನ್ನು ಬಿಜೆಪಿಗೆ ಕರೆತರದೆ ಅಲ್ಲೊಂದು ಇಲ್ಲೊಂದು ಸುಳ್ಳಿನ ಕಂತೆ ಹೇಳಿ ಅಧಿಕಾರಕ್ಕಾಗಿ ಇದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪೊಟ್ಯಾಟೋ ಕ್ಲಬ್ ಮುಖಂಡರಾದ ಚಂದೇಗೌಡ, ಶಿವಲಿಂಗಶಾಸ್ತ್ರಿ ಗೋಷ್ಠಿಯಲ್ಲಿದ್ದರು.

Post a Comment

0 Comments