ಅರಕಲಗೂಡು: ತಾಲೂಕಿನ ದೊಡ್ಡಬೆಮ್ಮತ್ತಿ ಕರ್ನಾಟಕ ಬ್ಯಾಂಕ್‌ನಲ್ಲಿ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವ್ಯವಸ್ಥಾಪಕರನ್ನು ವರ್ಗಾವಣೆಗೊಳಿಸಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ದೊಡ್ಡಬೆಮ್ಮತ್ತಿ ಗ್ರಾಮದ ಸರ್ಕಲ್‌ನಿಂದ ಶಂಕು ಊದುತ್ತಾ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು ವ್ಯವಸ್ಥಾಪಕರ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಬ್ಯಾಂಕ್ ಮುಂದೆ ಧರಣಿ ಕುಳಿತರು.
ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಮಾತನಾಡಿ, ಬ್ಯಾಂಕ್‌ನಲ್ಲಿ ವ್ಯವಹರಿಸಲು ಬರುವ ರೈತಾಪಿ ವರ್ಗದ ಜನರು ಹಾಗೂ ಗ್ರಾಹಕರೊಂದಿಗೆ ವ್ಯವಸ್ಥಾಪಕರು ಸೌಜನ್ಯದಿಂದ ವರ್ತಿಸುತ್ತಿಲ್ಲ. ರೈತರ ಪಿಂಚಣಿ ಹಣ, ಹಾಲಿನ ಹಣ ಮತ್ತಿತರ ಬ್ಯಾಂಕ್ ಸಂದಾಯವಾಗುವ ಹಣವನ್ನು ಸಾಲಕ್ಕೆ ಹಿಡಿದು ಕಿರುಕುಳ ನೀಡುತ್ತಿದ್ದಾರೆ. ರೈತ ವಿರೋಧಿ ಧೋರಣೆ ನೀತಿ ಅನುಸರಿಸುತ್ತಿರುವ ಬ್ಯಾಂಕ್ ವ್ಯವಸ್ಥಾಪಕ ಶ್ರೀಪಾದ್ ಭಟ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಧಾವಿಸಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಸನ ವಲಯ ಪ್ರಬಂಧಕ ಪಾರ್ಥ ಲಿಂಗಯ್ಯ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಬ್ಯಾಂಕ್‌ನಲ್ಲಿ ಓಟಿಎಸ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಸುಸ್ಥಿದಾರರು ಸಾಲ ಮರು ಪಾವತಿಸಿದರೆ ಬಡ್ಡಿ ಮನ್ನಾ ಮಾಡಲಾಗುವುದು. ಸಾಲ ಮರು ಪಾವತಿ ಮಾಡಿದ ಎಲ್ಲ ರೈತರಿಗೆ ಮರು ಸಾಲ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಬ್ಯಾಂಕ್‌ಗೆ ಸಂದಾಯವಾಗುವ ಯಾವುದೇ ಹಣವನ್ನು ಸಾಲಕ್ಕೆ ವಜಾಗೊಳಿಸುವುದಿಲ್ಲ ಎಂದು ಭರವಸೆ ನೀಡಿದರು.
ಬ್ಯಾಂಕ್ ವ್ಯವಸ್ಥಾಪಕ ಶ್ರೀಪಾದ್ ಭಟ್ ಮಾತನಾಡಿ, ಬ್ಯಾಂಕ್‌ನಲ್ಲಿ ರೈತರು ಮತ್ತು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸಿದರೆ ಕ್ಷಮೆ ಕೇಳುತ್ತೇನೆ. ಮುಂದಿನ ದಿನಗಳಲ್ಲೆ ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸಿವುದುದಾಗಿ ತಿಳಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ತಾಲೂಕು ರೈತ ಸಂಘದ ಮುಖಂಡರಾದ ಹೊನಾಗನಹಳ್ಳಿ ಜಗದೀಶ್, ಪ್ರಕಾಶ್, ರಾಮಕೃಷ್ಣ, ರಘು, ವೇದಾನಂದ, ಭುವನೇಶ್, ಹಾನಗಲ್ ಶಿವಣ್ಣ, ಜಗನ್ನಾಥ್, ಹರಳಹಳ್ಳಿ ತಮ್ಮೇಗೌಡ, ಕೃಷ್ಣಾರೆಡ್ಡಿ, ವೆಂಕಟೇಶ್, ಹೇಮಲತಾ, ಲಕ್ಷö್ಮಮ್ಮ, ಬಂದಿನಗಹಳ್ಳಿ ರವಿ ಇತರರು ಪಾಲ್ಗೊಂಡಿದ್ದರು.
0 Comments