ಅರಕಲಗೂಡು: ಭಾರತದ ಸಂವಿಧಾನ ವಿಶ್ವದಲ್ಲೆ ಅತ್ಯಂತ ಶ್ರೇಷ್ಟವಾದ ಸಂವಿಧಾನ ಎನಿಸಿದೆ ಎಂದು ಇಲ್ಲಿನ ಹಿರಿಯ ಶ್ರೇಣಿ ನ್ಯಾಯಾಧೀಶ ಮುಜಫರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಿಧಾನ ದಿನ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿವಿಧ ದೇಶಗಳ ಸಂವಿಧಾನಗಳ ಅಧ್ಯಯನ ನಡೆಸಿ ರಚಿಸಿರುವ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸಮಾನವಾದ ಅವಕಾಶ ಕಲ್ಪಿಸಿದೆ. ಸಂವಿಧಾನದ ಆಶಯದಂತೆ ನಡೆದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಎಂದರು.
ಭಾರತ ಸಂವಿಧಾನದ ಮಹತ್ವ ಮತ್ತು ಧ್ಯೇಯೋದ್ಧೇಶಗಳ ಕುರಿತು ವಕೀಲ ಎ.ಆರ್. ಜನಾರ್ಧನ ಗುಪ್ತ ಹಾಗೂ ಭಾರತ ಸಂವಿಧಾನದ ರೂಪು ರೇಷೆ ಕುರಿತು ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ರಾಮಸಿರಿ ಮಾಹಿತಿ ನೀಡಿದರು.
ಜೆಎಂಎಫ್ ಸಿ ನ್ಯಾಯಾಧೀಶ ಹರೀಶ್, ಹೆಚ್ಚುವರಿ ನ್ಯಾಯಾಧೀಶೆ ಪ್ರೀತಿ ಎಲ್ ಮಳವಳ್ಳಿ, ವಕೀಲ ಬಿ.ಸಿ.ರಾಜೇಶ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಎಚ್.ಎಸ್.ಸ್ಮಿತಾ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಕೀಲರ ಸಂಘದ ಅಧ್ಯಕ್ಷ ಗೋವಿಂದ, ಕಾರ್ಯದರ್ಶಿ ದೊರೆಸ್ವಾಮಿ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಸಿ.ಶಶಿಧರ್ ಉಪಸ್ಥಿತರಿದ್ದರು.
0 Comments