ಅರಕಲಗೂಡು: ಮಹಿಳೆಯರು ಹಾಗೂ ಬಡ ವರ್ಗದ ಜನರು ಸಂವಿಧಾನದಡಿ ದೊರೆಯುವ ಮೂಲಭೂತ ಹಕ್ಕುಗಳನ್ನು ಹೊಂದಲು ಕಾನೂನಿನ ಅರಿವು ಪಡೆದುಕೊಳ್ಳುವುದು ಅತ್ಯವಶ್ಯಕ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಮುಜಾಫರ್ ಎ. ಮಾಂಜರಿ ತಿಳಿಸಿದರು.
ತಾಲೂಕಿನ ಮಲ್ಲಿಪಟ್ಟಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ದೊರೆತು 74 ವರ್ಷಗಳು ಕಳೆದರೂ ಸಮಾಜದಲ್ಲಿ ಜೀವಿಸುವ ಅನೇಕರಿಗೆ ಕನಿಷ್ಠವಾದ ಕಾನೂನು ಜ್ಞಾನ ಇಲ್ಲವಾಗಿದೆ. ಅನಕ್ಷರತೆ, ಅಜ್ಞಾನ ಹೋಗಲಾಡಿಸದ ಕಾರಣ ಜನರಲ್ಲಿ ಸುಶೀಕ್ಷತೆ ಕಣ್ಮರೆಯಾಗುತ್ತಿದೆ. ಹೀಗಾಗಿ ಕಾನೂನು ಅರಿವಿನ ಕೊರತೆ ಕಾಡುತ್ತಿದೆ. ಇದರ ಪರಿಣಾಮ ಅದೆಷ್ಟೋ ಬಡ ವರ್ಗದ ಜನರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಯೋಚಿಸಿ ಎಲ್ಲರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳದೆ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನ್ಯಾಯಾಧೀಶೆ ಪ್ರೀತಿ ಎಲ್. ಮಳವಳ್ಳಿ ಮಾತನಾಡಿ, ಮಹಿಳೆಯರು, ದುರ್ಬಲರು, ಸಂತ್ರಸ್ತರಿಗೆ ಉಚಿತವಾಗಿ ಕಾನೂನು ಅರಿವು ಸಿಗುವುದಲ್ಲದೆ ನ್ಯಾಯಾಲಯದ ವ್ಯಾಜ್ಯಗಳಲ್ಲಿಯೂ ಸೂಕ್ತ ಪರಿಹಾರ ದೊರಕಲಿದೆ. ಹಳ್ಳಿಗಳಲ್ಲಿ ಹಾಗೂ ಕೌಟುಂಬಿಕವಾಗಿ ಕಗ್ಗಂಟಾಗಿರುವ ವ್ಯಾಜ್ಯಗಳನ್ನು ರಾಜೀ ಸಂಧಾನದ ಮುಖೇನ ಬಗೆಹರಿಸಿಕೊಳ್ಳಲು ಒತ್ತು ನೀಡಬೇಕು. ಇದರಿಂದ ಜೀವಮಾನವಿಡೀ ಅನುಭವಿಸುವ ಕಾನೂನಿ ಕಷ್ಟ ಕೋಟಲೆಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮಾತನಾಡಿ, ಕಾನೂನು ಅರಿವು ಇದ್ದರೆ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ. ಆದರೆ ಇಂದಿಗೂ ಸಮಾಜದಲ್ಲಿ ಜೀವಿಸುವ ಬಹುತೇಕರು ಅರಿವಿಲ್ಲದೆ ತಪ್ಪೆಸಗಿ ಕಾನೂನು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಇದಕ್ಕಾಗಿ ಕಾನೂನು ಅರಿವು ಗಳಿಸುವುದು ಮುಖ್ಯ. ಇಂಥ ಕಾರ್ಯಕ್ರಮಗಳ ಉಪಯೋಗ ಪಡೆದು ಬೇರೆಯವರಿಗೂ ಅರಿವು ಮೂಡಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ವಕೀಲ ಎಸ್.ಟಿ. ಪ್ರಕಾಶ್ ಬಡತನ ನಿರ್ಮೂಲನೆ ಕುರಿತು ಉಪನ್ಯಾಸ ನೀಡಿದರು.
ಕಿರಿಯ ಶ್ರೇಣಿ ನ್ಯಾಯಾಧೀಶ ಹರೀಶ್ ಅವರು ಸಾರ್ವಜನಿಕರಿಂದ ಕಾನೂನು ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾರ್ಗ ಸೂಚಿಸಿದರು.
ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ದೊರೆಸ್ವಾಮಿ, ಖಜಾಂಚಿ ಎಂ.ಎಸ್. ಆನಂದ, ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಸುಮಿತ್ರಮ್ಮ, ವಸಂತ, ಯೋಗೇಶ್, ಚಂದ್ರೇಗೌಡ, ಪಿಡಿಒ ರಂಗಸ್ವಾಮಿ ಇದ್ದರು.
0 Comments