ಅರಕಲಗೂಡು: ಮಳೆಗೆ ಮುಂದುವರಿದ ಹಾನಿ, ಮನೆಗಳ ಗೋಡೆ ಕುಸಿತ

ಅಕಲಗೂಡು: ತಾಲೂಕಿನಲ್ಲಿ ವರುಣನ ಅಬ್ಬರ ಮುಂದುವರಿದಿದ್ದು ಬುಧವಾರ ರಾತ್ರಿ ಬಿದ್ದ ಭಾರಿ ಮಳೆಗೆ ಎರಡು ಮನೆಗಳಿಗೆ ಹಾನಿ ಸಂಭವಿಸಿ ಮರವೊಂದಕ್ಕೆ ಸಿಡಿಲು ಹೊಡೆದಿರುವ ಘಟನೆ ಸಂಭವಿಸಿದೆ. 
ವರುಣ ರುದ್ರನರ್ತನಕ್ಕೆ ಹಲವೆಡೆ ಸಾರ್ವಜನಿಕ ಆಸ್ತಿಗೆ ಅಪಾರ ಹಾನಿಯಾಗಿದೆ. ಕಸಬಾ ಹೋಬಳಿ ವಿಜಾಪುರ ಅರಣ್ಯ ಗ್ರಾಮದ ರಾಮಯ್ಯ ಎಂಬುವವರ ಮನೆಯ ಗೋಡೆ ಕುಸಿದಿದೆ. ದೊಡ್ಡಮಗ್ಗೆ ಹೋಬಳಿ ಅಗ್ರಹಾರ ಗ್ರಾಮದ ಕುಮಾರಿ ಕೋಂ ಚಂದ್ರೇಗೌಡ ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಪಟ್ಟಣ ವ್ಯಾಪ್ತಿಯ ಹೆಂಟಗೆರೆ ಕೊಪ್ಪಲು ಗ್ರಾಮದ ಎಚ್.ಟಿ. ಮಂಜುನಾಥ್ ಅವರಿಗೆ ಸೇರಿದ ಭಾರಿ ಗಾತ್ರದ ಸಿಲ್ವರ್ ಮರಕ್ಕೆ ಸಿಡಿಲು ಹೊಡೆದ ಪರಿಣಾಮ ಮರ ಮುರಿದು ಬಿದ್ದಿದೆ. ಗ್ರಾಮದ ಹಲವು ಮನೆಗಳಲ್ಲಿ ವಿದ್ಯುತ್ ಉಪಕರಣಗಳಿಗೆ ತೀವ್ರ ಹಾನಿಯಾಗಿದೆ.
ಸತತ ಮಳೆಗೆ ನಾಲೆಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಕೆರೆ, ಕಟ್ಟೆಗಳು ಕೋಡಿ ಬಿದ್ದು ಅಚ್ಚುಕಟ್ಟು ಜಮೀನಿಗೆ ನೀರು ನುಗ್ಗಿದೆ. 

ಕೆಲವು ಕಡೆ ತಗ್ಗು ಪ್ರದೇಶದ ತೋಟಗಳು ಜಲಾವೃತವಾಗಿ ಅಡಿಕೆ ಮತ್ತು ಬಾಳೆ ಬೆಳೆಗಳು ಹಾನಿಗೊಳಗಾಗಿವೆ.
ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳು ಗುಂಡಿ ಬಿದ್ದು ಕೆಸರುಮಯವಾಗಿ ಹಾಳಾಗಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಕೊಣನೂರು- ಮೈಸೂರು ಮಾರ್ಗದ ರಸ್ತೆ ಮೇಲಿನ ಸಂಚಾರ ಪ್ರಯಾಣಿಕರ ಪಾಲಿಗೆ ನರಕವಾಗುತ್ತಿದೆ. ಹಲವೆಡೆ ವಾಸದ ಮನೆಗಳ ಮುಂಭಾಗ ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದು ನಿವಾಸಿಗಳು ಶಪಿಸುವಂತಾಗಿದೆ.

Post a Comment

0 Comments