ಅರಕಲಗೂಡು: ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಸೋಮವಾರ ರಾತ್ರಿ ಸಿಡಿಲು ಬಡಿದು 70 ಅಡಕೆ ಮರಗಳು ನಾಶವಾದ ಘಟನೆ ಕೆರಗೋಡಿನಲ್ಲಿ ನಡೆದಿದೆ.
ಗ್ರಾಮದ ರೈತ ಚಿದಾನಂದ ಎಂಬುವರಿಗೆ ಸೇರಿದ ಅಡಕೆ ಮರಗಳು ಸಿಡಿಲಿಗೆ ಬಲಿಯಾಗಿವೆ. ಅರ್ಧ ಎಕರೆಯಲ್ಲಿ ಫಸಲು ಬಿಟ್ಟಿದ್ದ ಮರಗಳಿಗೆ ಅಪ್ಪಳಿಸಿರುವ ಸಿಡಿಲಿಗೆ ಉರಿದು ಅಡಕೆ ಹಾನಿಗೀಡಾಗಿವೆ. ಸಿಡಿಲಿಗೆ ಬಲಿಯಾದ ಅಡಕೆ ಮರಗಳನ್ನು ಕಂಡು ರೈತ ಕಣ್ಣೀರಿಡುತ್ತಿದ್ದಾರೆ.
ಅಡಕೆ ಧಾರಣೆ ಗಗನಕ್ಕೇರಿದ ಖುಷಿಯಲ್ಲಿದ್ದ ನಮ್ಮ ಕುಟುಂಬಕ್ಕೆ ಸಿಡಿಲಿನ ಆಘಾತಕ್ಕೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ. ಲಕ್ಷಾಂತರ ರೂಪಾಯಿ ಅಡಕೆ ಫಸಲು ಹಾಳಾಗಿದೆ ಎಂದು ರೈತ ಚಿದಾನಂದ ಅಳಲು ತೋಡಿಕೊಂಡರು.
ಭೇಟಿ: ಕೆರಗೋಡು ಗ್ರಾಮದಲ್ಲಿ ಅಡಕೆ ತೋಟಕ್ಕೆ ಸಿಡಿಲು ಬಡಿದು ಹಾನಿಗೀಡಾದ ಸ್ಥಳಕ್ಕೆ ಮಂಗಳವಾರ ರಾಜಸ್ವ ನಿರೀಕ್ಷಕ ಸಿ. ಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ಕಾಂಬ್ಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಡಿಲಿನ ಹೊಡೆತಕ್ಕೆ ಹಾನಿಗೀಡಾದ ಅಡಕೆ ಮರಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
0 Comments